ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಪ್ರವಾಸಕ್ಕೆ ಆಗಮಿಸಿದಕ್ಷಣ, ಪ್ರಧಾನಿ ನರೇಂದ್ರ ಮೋದಿ ಸ್ವತಃ ಮುಂದಾಳುತ್ವವಹಿಸಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದು, ಎರಡು ದೇಶಗಳ ನಾಯಕರು ಕೈಕುಲುಕಿ, ನಂತರ ಒಂದೇ ಕಾರಿನಲ್ಲಿ ಮಾತನಾಡುತ್ತ, ಮುಂದುವರಿದ ದೃಶ್ಯವು ದ್ವಿಪಕ್ಷೀಯ ಬಾಂಧವ್ಯದ ಗಾಢತೆಯನ್ನು ಮತ್ತಷ್ಟು ಸ್ಪಷ್ಟಪಡಿಸಿತು.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಪುಟಿನ್, ಪ್ರಧಾನಿ ಮೋದಿಯ ಕುರಿತು ಹೊಗಳಿಕೆಯ ಮಾತನ್ನಾಡಿದ್ದಾರೆ. “ಮೋದಿಯವರೊಂದಿಗೆ ಮಾತುಕತೆಗೆ ಸದಾ ವಿಶ್ವಾಸದ ಸ್ವರ. ಅವರು ದೃಢನಿಷ್ಠರು, ವಿಶ್ವಾಸಾರ್ಹರು. ಭಾರತೀಯರು ಮೋದಿಯನ್ನು ತಮ್ಮ ನಾಯಕರಾಗಿ ಪಡೆದಿರುವುದು ದೊಡ್ಡ ಅದೃಷ್ಟ” ಎಂದು ಪುಟಿನ್ ಶ್ಲಾಘಿಸಿದರು. ಭಾರತ–ರಷ್ಯಾ ಸಂಬಂಧವನ್ನು ವಿಸ್ತರಿಸಲು ಮೋದಿ ತೋರಿಸುತ್ತಿರುವ ಬದ್ಧತೆ ವಿಶೇಷವಾಗಿ ರಕ್ಷಣಾ, ಆರ್ಥಿಕ, ತಂತ್ರಜ್ಞಾನ ಮತ್ತು ಮಾನವೀಯ ನೆರವು ಕ್ಷೇತ್ರಗಳಲ್ಲಿ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಮಾಸ್ಕೋ ಭೇಟಿಯ ಸಂದರ್ಭ ಉಭಯ ನಾಯಕರು ಸಾಮಾನ್ಯ ಗೆಳೆಯರಂತೆಯೇ ಸಂಜೆ ಕಾಲ ಕಳೆಯುತ್ತಿದ್ದ ಕ್ಷಣಗಳನ್ನು ಪುಟಿನ್ ನೆನಪಿಸಿಕೊಂಡರು. ಚಹಾ ಜೊತೆ ಸರಳ ಸಂಭಾಷಣೆ ನಡೆಸಿದ ಆ ಭೇಟಿಯು, “ನಮ್ಮ ಸ್ನೇಹ ಕೇವಲ ರಾಜಕೀಯವಲ್ಲ, ಸಾಮಾನ್ಯ ಮನುಷ್ಯರಂತೆ, ಅದಕ್ಕಿಂತ ಹೆಚ್ಚಾಗಿ ಆತ್ಮೀಯ ಗೆಳೆಯರಂತಿದೆ ” ಎಂದು ಹೇಳಿದರು.
ಪುಟಿನ್ ಈಗ ದ್ವಿಪಕ್ಷೀಯ ಮಾತುಕತೆ, 23ನೇ ಭಾರತ–ರಷ್ಯಾ ವಾರ್ಷಿಕ ಶೃಂಗಸಭೆ ಮತ್ತು ಅನೇಕ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯೊಂದಿಗೆ ಭಾರತದಲ್ಲಿದ್ದಾರೆ.

