ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಬಿಐ ಈಗ ಗ್ರಾಹಕರ ಸೇವೆಗೆ ಅತಿಹೆಚ್ಚು ಅದ್ಯತೆ ಕೊಡಲು ನಿರ್ಧರಿಸಿದೆ. ಆರ್ಬಿಐ ಒಂಬುಡ್ಸ್ಮೆನ್ ಬಳಿ ಒಂದು ತಿಂಗಳಿಗಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿರುವ ಎಲ್ಲಾ ದೂರುಗಳನ್ನು ಶೀಘ್ರ ಇತ್ಯರ್ಥ ಪಡಿಸಲು ಎರಡು ತಿಂಗಳ ಅಭಿಯಾನ ಕೈಗೊಳ್ಳಲಿದೆ.
2026ರ ಜನವರಿಯಿಂದ ಫೆಬ್ರುವರಿವರೆಗೆ ಎರಡು ತಿಂಗಳ ಕಾಲ ಈ ಅಭಿಯಾನ ಇರಲಿದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ನಾವು ಗ್ರಾಹಕ ಸೇವೆಗಳನ್ನು ಸುಧಾರಿಸಲು ಗಮನ ಹರಿಸಿದ್ದೇವೆ. ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಮರು ಕೆವೈಸಿ, ಹಣಕಾಸು ಒಳಗೊಳ್ಳುವಿಕೆ ಮತ್ತು ನಿಮ್ಮ ಹಣ ನಿಮ್ಮ ಅಧಿಕಾರ ಅಭಿಯಾನಗಳು ಇಂಥ ಕೆಲ ಕ್ರಮಗಳಾಗಿವೆ. ಈ ವರ್ಷದ ಆರಂಭದಲ್ಲಿ ನಮ್ಮ ಸಿಟಿಜನ್ ಚಾರ್ಟರ್ ಅನ್ನೂ ಪರಾಮರ್ಶಿಸಿದ್ದೇವೆ.
ನಮ್ಮ ಎಲ್ಲಾ ಸೇವೆಗಳಿಗೆ ಅರ್ಜಿಗಳನ್ನು ಆನ್ಲೈನ್ನಲ್ಲೇ ನೀಡಿದ್ದೇವೆ. ಸಮಸ್ಯೆ ಇತ್ಯರ್ಥಪಡಿಸಲಾಗಿರುವುದರ ವಿವರವನ್ನು ಪ್ರತೀ ತಿಂಗಳು ನೀಡುತ್ತಿದ್ದೇವೆ. ಬಾಕಿ ಉಳಿದಿರುವ ಅರ್ಜಿಗಳನ್ನು ಪ್ರತೀ ತಿಂಗಳ ಮೊದಲ ತಾರೀಖಿನಿಂದು ಪ್ರಕಟಿಸುತ್ತಿದ್ದೇವೆ’ ಎಂದು ಸಂಜಯ್ ಮಲ್ಹೋತ್ರಾ ಅವರು ಆರ್ಬಿಐನಿಂದ ತೆಗೆದುಕೊಳ್ಳಲಾಗಿರುವ ಗ್ರಾಹಕ ಕೇಂದ್ರಿತ ಕ್ರಮಗಳ ವಿವರ ನೀಡಿದ್ದಾರೆ
ಆರ್ಬಿಐ ನಿಯಂತ್ರಿತವಾಗಿರುವ ಎಲ್ಲಾ ಹಣಕಾಸು ಸಂಸ್ಥೆಗಳೂ ಕೂಡ ತಮ್ಮ ನೀತಿ ಮತ್ತು ಕಾರ್ಯಾಚರಣೆಗಳಲ್ಲಿ ಗ್ರಾಹಕರಿಗೆ ಆದ್ಯತೆ ಕೊಡಬೇಕು. ಗ್ರಾಹಕ ಸೇವೆ ಸುಧಾರಿಸಬೇಕು ಮತ್ತು ಸಮಸ್ಯೆಗಳನ್ನು ಕಡಿಮೆಗೊಳಿಸಬೇಕು. ಮುಂದಿನ ವರ್ಷದ ಜನವರಿ 1ರಿಂದ ಎರಡು ತಿಂಗಳ ಅಭಿಯಾನ ನಡೆಸಲು ಉದ್ದೇಶಿಸಿದ್ದೇವೆ. ಆರ್ಬಿಐ ಒಂಬುಡ್ಸ್ಮೆನ್ (ಸಾರ್ವಜನಿಕ ತನಿಖಾಧಿಕಾರಿ) ಬಳಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಇರುವ ದೂರುಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲಾ ಸಂಸ್ಥೆಗಳೂ ಸಹಕರಿಸಬೇಕು ಎಂದು ನಿರೀಕ್ಷಿಸುತ್ತೇನೆ’ ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ.

