January21, 2026
Wednesday, January 21, 2026
spot_img

ಶಾಲಾ ಆವರಣದಲ್ಲಿರುವ ಶ್ವಾನಗಳ ಎಣಿಕೆಗೆ ಶಿಕ್ಷಣ ಇಲಾಖೆ ಸೂಚನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ನೀಡಿದ ಬೆನ್ನಲ್ಲೇ ಎಲ್ಲಾ ಖಾಸಗಿ, ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ತಮ್ಮ ಆವರಣದಲ್ಲಿರುವ ಬೀದಿ ನಾಯಿಗಳ ಸಂಖ್ಯೆಯನ್ನು ಎಣಿಸಿ ವರದಿಯನ್ನು ಸಲ್ಲಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಇದಕ್ಕಾಗಿ ಪ್ರತಿ ಶಾಲೆಯು ಪ್ರಾಂಶುಪಾಲರು ಅಥವಾ ಹಿರಿಯ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕೆಂದು ಇಲಾಖೆ ನಿರ್ದೇಶಿಸಿದೆ. ಶಾಲಾ ಆವರಣದಲ್ಲಿರುವ ನಾಯಿಗಳನ್ನು ಆಶ್ರಯ ತಾಣಗಳಿಗೆ ಸಾಗಿಸುವಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸಹಾಯ ಮಾಡಬೇಕು. ಬೀದಿ ನಾಯಿಗಳು ಮತ್ತೆ ಆವರಣಕ್ಕೆ ಪ್ರವೇಶಿಸದಂತೆ ತಡೆಯಲು ಶಾಲೆಗಳು ಕಾಂಪೌಂಡ್ ಗೋಡೆ ಅಥವಾ ಬೇಲಿಯನ್ನು ಹೊಂದಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಮತ್ತು ಜಿಲ್ಲಾ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳು ನಿರ್ದೇಶನವನ್ನು ಪಾಲಿಸುವಂತೆ ಖಚಿತಪಡಿಸಿಕೊಳ್ಳಲು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಸೂಚಿಸಿದೆ.

ಈ ನಡುವೆ ಶಿಕ್ಷಣ ಇಲಾಖೆಯ ಈ ಆದೇಶಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ನೋಂದಾಯಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಮಾತನಾಡಿ, ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆಗಳು ಸಮೀಪಿಸುತ್ತಿವೆ. ನಾವು ಗಮನಹರಿಸಬೇಕಾದ ಇತರ ಕರ್ತವ್ಯಗಳಿವೆ. ಶಿಕ್ಷಕರು ಡಿಸೆಂಬರ್ 15ರ ಮೊದಲು ಪಾಠಗಳನ್ನು ಪೂರ್ಣಗೊಳಿಸಬೇಕು. ಈ ಸಮಯದಲ್ಲಿ ಶಿಕ್ಷಕರು ಮತ್ತು ಪ್ರಾಂಶುಪಾಲರು ನಾಯಿಗಳನ್ನು ಎಣಿಸುವುದಲ್ಲದೆ, ಅವುಗಳನ್ನು ಸ್ಥಳಾಂತರಿಸಲು ಸಂಸ್ಥೆಗಳೊಂದಿಗೆ ಸಹಕರಿಸುವಂತೆ ಕೇಳಿಕೊಳ್ಳುವುದು ನ್ಯಾಯಯುತವಲ್ಲ. ಶಿಕ್ಷಣ ಸಂಸ್ಥೆಗಳು ಬೀದಿ ನಾಯಿಗಳನ್ನು ಎಣಿಸುವುದನ್ನು ಕಡ್ಡಾಯಗೊಳಿಸಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Must Read