ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ನಿಜ ಎಂದು ಒಪ್ಪಿಕೊಂಡಿದ್ದು, ರಾಜಕಾರಣದಲ್ಲಿ ಬಾಂಧವ್ಯ, ನೆಂಟಸ್ತನ, ಸ್ನೇಹ ಎಲ್ಲ ಇದ್ದೇ ಇರುತ್ತದೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ಭೇಟಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, “ನಾನು ಸತೀಶ್ ಭೇಟಿ ಆಗಿದ್ದು ನಿಜ. ನಾವಿಬ್ಬರೂ ಸಹೋದ್ಯೋಗಿಗಳು. ಸಂಪುಟದಲ್ಲಿ, ರಾತ್ರಿ ಊಟಕ್ಕೆ, ಬೆಳಗ್ಗೆ ತಿಂಡಿಗೆ ಎಲ್ಲರೂ ಸೇರುತ್ತೇವೆ. ಇವೆಲ್ಲ ಸಾಮಾನ್ಯವಾಗಿ ನಡೆಯುವ ಸಂಗತಿಗಳು” ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಕುತೂಹಲಗಳನ್ನು ತಳ್ಳಿಹಾಕಿದ ಅವರು, ತಾವು ಮತ್ತು ಸಚಿವ ಎಂ.ಬಿ. ಪಾಟೀಲ್ ಅವರು ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸುವ ಬಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿರುವುದಾಗಿ ತಿಳಿಸಿದರು. “ಆಂಧ್ರ ಪ್ರದೇಶ, ತಮಿಳುನಾಡು ಮತ್ತು ತೆಲಂಗಾಣದಿಂದ ನಮಗೆ ಸ್ಪರ್ಧೆ ಎದುರಾಗುತ್ತಿದೆ. ನಾವು ಹೇಗೆ ಸ್ಪರ್ಧಿಸಬೇಕು ಎಂದು ಚರ್ಚಿಸಿದ್ದೇವೆ. ಅದೇ ರೀತಿ ಸತೀಶ್ ಜಾರಕಿಹೊಳಿ ಅವರನ್ನೂ ಭೇಟಿ ಮಾಡಿ ಮಾತನಾಡಿದ್ದೇನೆ” ಎಂದರು.
ಒಂದು ಮದುವೆಯಲ್ಲಿ ಸತೀಶ್ ಅವರೊಂದಿಗೆ ಸೇರಿ ರಾಜ್ಯ ಮತ್ತು ಪಕ್ಷದ ವಿಷಯಗಳ ಬಗ್ಗೆ ಮಾತನಾಡಿದ್ದಾಗಿ ಹೇಳಿದ ಅವರು, “ನಾವೆಲ್ಲರೂ ಸಹೋದ್ಯೋಗಿಗಳು. ನಾವು ವೈರಿಗಳಂತೆ ನಿಮಗೆ ಕಾಣುತ್ತಿದ್ದೀವಾ? ಇದರಲ್ಲಿ ಯಾವುದೇ ಕುತೂಹಲ ಇಲ್ಲ” ಎಂದು ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.

