ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಸೈಬರ್ ಅಪರಾಧಗಳ ಸುಳಿಯಲ್ಲಿ ವಿದ್ಯಾವಂತರೇ ಹೆಚ್ಚಾಗಿ ಸಿಲುಕಿ ಹಣ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿರುವುದು ಸಮಾಧಾನ ತಂದಿದೆ. ‘ಡಿಜಿಟಲ್ ಅರೆಸ್ಟ್’ ಮತ್ತು ಆನ್‌ಲೈನ್ ‘ಟ್ರೇಡಿಂಗ್’ ಹೆಸರಿನಲ್ಲಿ ನಡೆಯುತ್ತಿದ್ದ ಮೋಸದ ಜಾಲಕ್ಕೆ ರಾಜ್ಯ ಪೊಲೀಸರು ಯಶಸ್ವಿಯಾಗಿ ಕಡಿವಾಣ ಹಾಕಿದ್ದಾರೆ.
ಈ ಕುರಿತು ಸ್ವತಃ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ಸೈಬರ್ ಅಪರಾಧ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳ ಫಲಿತಾಂಶವನ್ನು ಘೋಷಿಸಿದ್ದಾರೆ.
ಸೈಬರ್ ಕ್ರೈಂ ವಿಭಾಗಕ್ಕೆ ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿಪಿ ಹುದ್ದೆಯನ್ನು ಸೃಷ್ಟಿಸಿ ನೇಮಕ ಮಾಡಲಾಗಿದೆ. ಪ್ರತಿಷ್ಠಾಪಿಸಲಾದ ಸೈಬರ್ ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್ ಪೊಲೀಸ್ ಠಾಣೆಗಳ ಮೂಲಕ ವಂಚನೆ ಪ್ರಕರಣಗಳ ದಾಖಲಾತಿ ಹೆಚ್ಚಾಗಿದೆ.
ಅಮೆರಿಕಾದಲ್ಲಿ ವಾಸವಿದ್ದವರನ್ನು ‘ಡಿಜಿಟಲ್ ಅರೆಸ್ಟ್’ ಮಾಡಿ ವಂಚಿಸುತ್ತಿದ್ದ ಅಂತರಾಜ್ಯ ಜಾಲದ ವಂಚಕರನ್ನೂ ರಾಜ್ಯ ಪೊಲೀಸರು ಬಂಧಿಸಿ, ಈ ರೀತಿಯ ಸಂಕೀರ್ಣ ಅಪರಾಧಗಳನ್ನು ಭೇದಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ, 2025 ರ ಪ್ರಸ್ತುತ ವರ್ಷದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳ ಸಂಖ್ಯೆ 13,000ಕ್ಕೆ ಇಳಿಕೆ ಕಂಡಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
| ವರ್ಷ | ದಾಖಲಾದ ಪ್ರಕರಣಗಳ ಸಂಖ್ಯೆ |
| 2022 | 12,550 |
| 2023 | 21,903 |
| 2024 | 21,995 |
| 2025 | 13,000 |
ಕಳೆದ ವರ್ಷ (2024) ದಾಖಲಾಗಿದ್ದ 21,995 ಪ್ರಕರಣಗಳಿಗೆ ಹೋಲಿಸಿದರೆ, 2025 ರಲ್ಲಿ ಸುಮಾರು 9,000 ಪ್ರಕರಣಗಳ ಇಳಿಕೆಯಾಗಿರುವುದು ಗಮನಾರ್ಹ ಸಾಧನೆಯಾಗಿದೆ.
ಸಾರ್ವಜನಿಕರು ಆನ್‌ಲೈನ್ ವಂಚನೆಗೆ ಒಳಗಾದಲ್ಲಿ ತಕ್ಷಣವೇ ಸಹಾಯವಾಣಿ ಸಂಖ್ಯೆ 1930 ಕ್ಕೆ ಕರೆ ಮಾಡುವ ಮೂಲಕ ದೂರು ದಾಖಲಿಸಬಹುದು. ಈ ಕರೆಗಳನ್ನು ಸ್ವೀಕರಿಸಲು 66 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೈಬರ್ ಕ್ರೈಮ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸರ್ವಪ್ರಯತ್ನ ನಡೆಸುತ್ತಿದೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ.

