ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರಮುಖ ಕೃಷಿ ಆಧಾರಿತ ವಲಯವಾದ ಸಕ್ಕರೆ ಉದ್ಯಮದ ಸುಧಾರಣೆಗಾಗಿ ಮತ್ತು ಕರ್ನಾಟಕದ ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸಂಸತ್ತಿನ ಚಳಿಗಾಲ ಅಧಿವೇಶನದ ಶೂನ್ಯ ವೇಳೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಕಬ್ಬಿನ ರಿಕವರಿ ದರ ಕಡಿತ, ಎಫ್‌ಆರ್‌ಪಿ ದರ ನಿಗದಿ ವಿಧಾನದ ಬದಲಾವಣೆ ಮತ್ತು ಸಕ್ಕರೆಯ ಎಂಎಸ್‌ಪಿ ಹೆಚ್ಚಳಕ್ಕೆ ಅವರು ಪ್ರಮುಖವಾಗಿ ಆಗ್ರಹಿಸಿದ್ದಾರೆ.
ಪ್ರಸ್ತುತ, ಎಫ್‌ಆರ್‌ಪಿ ದರವನ್ನು ನಿಗದಿಪಡಿಸುವಾಗ ಕಬ್ಬಿನ ರಿಕವರಿ ಪ್ರಮಾಣವನ್ನು 9.5% ರಿಂದ 10.25% ಕ್ಕೆ ಏರಿಕೆ ಮಾಡಲಾಗಿದೆ. ಆದರೆ, ಕರ್ನಾಟಕ ರಾಜ್ಯದ ಕಬ್ಬು ಬೆಳೆಯ ಸರಾಸರಿ ರಿಕವರಿ ದರವು 9.5% ಮಾತ್ರ ಇದೆ. ಹೀಗಾಗಿ, ಈ ಏರಿಕೆಯನ್ನು ಮರುಪರಿಶೀಲಿಸಿ, ರಾಜ್ಯದ ರೈತರಿಗೆ ಅನುಕೂಲವಾಗುವಂತೆ ರಿಕವರಿ ಪ್ರಮಾಣವನ್ನು ಪುನಃ 9.5% ಕ್ಕೆ ಇಳಿಕೆ ಮಾಡಬೇಕು ಎಂದು ಸಂಸದ ಕಡಾಡಿ ಅವರು ಸರ್ಕಾರವನ್ನು ವಿನಂತಿಸಿದರು.
ಎಫ್‌ಆರ್‌ಪಿ ದರವನ್ನು ನಿಗದಿ ಮಾಡುವಾಗ ಕಬ್ಬು ಕಟಾವು ಮತ್ತು ಸಾರಿಗೆ ವೆಚ್ಚವನ್ನು ಸೇರಿಸಿ ದರ ನಿಗದಿಪಡಿಸುವುದು ವೈಜ್ಞಾನಿಕವಲ್ಲ. ಈ ವೆಚ್ಚಗಳನ್ನು ಹೊರತುಪಡಿಸಿ ಎಫ್‌ಆರ್‌ಪಿ ದರ ನಿಗದಿ ಮಾಡುವುದು ತೀರಾ ಅಗತ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಇದು ರೈತರಿಗೆ ತಮ್ಮ ಬೆಳೆಯ ನಿಜವಾದ ಮೌಲ್ಯ ಸಿಗುವಲ್ಲಿ ಸಹಾಯಕವಾಗುತ್ತದೆ ಎಂಬುದು ಅವರ ವಾದವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಹೇಳಿದ ಕಡಾಡಿ ಅವರು, ಕಬ್ಬಿನ ಬೆಳೆಗೆ ಪ್ರತಿ ಟನ್‌ಗೆ 3,550 ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಘೋಷಿಸಿರುವುದನ್ನು ಸ್ವಾಗತಿಸಿದರು.
ಕರ್ನಾಟಕ ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ರೈತರ ಪರಿಶ್ರಮದಿಂದ ದೇಶದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಶೇ. 16% ರಷ್ಟು ಕೊಡುಗೆ ನೀಡುವ ಮೂಲಕ ರಾಜ್ಯವು ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 7.5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ವಾರ್ಷಿಕ ಸುಮಾರು 45 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಮತ್ತು 270 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆಯಾಗುತ್ತದೆ.
ಕೋಟ್ಯಂತರ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜೀವನೋಪಾಯ ಒದಗಿಸುತ್ತಿರುವ ಈ ಸಕ್ಕರೆ ಉದ್ಯಮಕ್ಕೆ ಉತ್ತೇಜನ ನೀಡಲು, ಕೇಂದ್ರ ಸರ್ಕಾರವು ಸಕ್ಕರೆಯ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ದರವನ್ನು ಹೆಚ್ಚಿಸಬೇಕು ಮತ್ತು ಕರ್ನಾಟಕಕ್ಕೆ ಎಥೆನಾಲ್ ಮಾರಾಟಕ್ಕೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಈರಣ್ಣ ಕಡಾಡಿ ಅವರು ಸರ್ಕಾರಕ್ಕೆ ಮನವಿ ಮಾಡಿದರು.

