Friday, December 5, 2025

ತಂದೆ ಎಂಬ ಪದಕ್ಕೆ ಮಸಿ ಬಳಿದ ಪಾಪಿ: ಕುಡಿತದ ಅಮಲಿನಲ್ಲಿ ಪುತ್ರಿಯರ ಮೇಲೆ ಅತ್ಯಾಚಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ತಂದೆಯನ್ನು ಮಕ್ಕಳು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ತಮ್ಮ ಮೊದಲ ಹೀರೋ ಎಂದು ಭಾವಿಸುತ್ತಾರೆ. ಆದರೆ, ಚಿತ್ರದುರ್ಗದಲ್ಲಿ ನಡೆದಿರುವ ಒಂದು ಭಯಾನಕ ಘಟನೆ ‘ತಂದೆ’ ಎಂಬ ಪವಿತ್ರ ಸಂಬಂಧಕ್ಕೆ ಕಳಂಕ ತಂದಿದೆ. ಮದ್ಯದ ಅಮಲಿನಲ್ಲಿ ಕೀಚಕನಂತೆ ವರ್ತಿಸಿದ ನೀಚ ತಂದೆಯೊಬ್ಬ ತನ್ನ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಗಣಿ ಕೆಲಸ ಮಾಡಿಕೊಂಡಿದ್ದ ಆರೋಪಿ ಮಂಜುನಾಥ್, ತನ್ನ 13 ಮತ್ತು 10 ವರ್ಷದ ಇಬ್ಬರು ಪುತ್ರಿಯರನ್ನು ಜಮೀನಿಗೆ ಕರೆದೊಯ್ದು ಈ ವಿಕೃತಿ ಮೆರೆದಿದ್ದಾನೆ. ಈ ಘಟನೆಯಿಂದ ಚಿತ್ರದುರ್ಗದ ಗ್ರಾಮಸ್ಥರು ತೀವ್ರ ಆಘಾತಕ್ಕೆ ಒಳಗಾಗಿದ್ದು, ಪಾಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.

ಆರೋಪಿ ಮಂಜುನಾಥ್‌ನ ದುಷ್ಕೃತ್ಯ ಇಷ್ಟಕ್ಕೆ ನಿಂತಿಲ್ಲ. ಆತನ ತಾಯಿಯೇ ನೀಡಿರುವ ಗಂಭೀರ ಆರೋಪದ ಪ್ರಕಾರ, ಮಂಜುನಾಥ್ ಹಿಂದೆ ತನ್ನ ಮೇಲೂ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಆಗ ಆತನಿಂದ ಹೇಗೋ ತಪ್ಪಿಸಿಕೊಂಡಿದ್ದ ಅಜ್ಜಿ, ಬಳಿಕ ಆ ಮನೆಯನ್ನು ಬಿಟ್ಟು ಬೇರೆಡೆ ವಾಸವಾಗಿದ್ದರು. “ಮಕ್ಕಳು ಅವನದೇ ಆದ ಕಾರಣ ಹೀಗೆ ಮಾಡಲಾರ ಎಂದು ಭಾವಿಸಿದ್ದೆ. ಆದರೆ, ಈ ನೀಚ ನನ್ನ ಮೊಮ್ಮಕ್ಕಳನ್ನೂ ಬಿಡಲಿಲ್ಲ” ಎಂದು ಆರೋಪಿಯ ತಾಯಿ ಭಾವುಕರಾಗಿದ್ದಾರೆ. ಇಂತಹವನಿಗೆ ಗಲ್ಲುಶಿಕ್ಷೆ ಆಗಲೇಬೇಕು. ಇಲ್ಲವಾದರೆ, ಬೇರೆ ಮಕ್ಕಳಿಗೂ ತೊಂದರೆ ಆಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆರೋಪಿಯು ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ ಎಂದೂ ತಿಳಿದುಬಂದಿದೆ. ಆ ಹೆಣ್ಣುಮಕ್ಕಳು ತಮ್ಮ ಮೇಲಾದ ದೌರ್ಜನ್ಯದ ವಿಷಯವನ್ನು ಶಾಲಾ ಶಿಕ್ಷಕರ ಬಳಿ ಹೇಳಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ.

ಗ್ರಾಮಸ್ಥರು ಈ ಕೃತ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ತನ್ನ ಮಕ್ಕಳ ಮೇಲೆ ಅತ್ಯಾಚಾರ ನಡೆದಿರುವುದು ಊರಿಗೇ ಕೆಟ್ಟ ಹೆಸರು ತಂದಿದೆ. ಬೇರೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪಗಳು ಇವನ ಮೇಲೆ ಇಲ್ಲ. ಆದರೆ, ತನ್ನ ಮಕ್ಕಳನ್ನೇ ಆತ ಬಿಟ್ಟಿಲ್ಲ” ಎಂದು ಕಿಡಿ ಕಾರಿದ್ದಾರೆ.

ಸದ್ಯ, ವಿಕೃತಿ ಮೆರೆದಿರುವ ಆರೋಪಿ ಮಂಜುನಾಥ್‌ನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಕಾನೂನು ಕ್ರಮ ಮುಂದುವರೆದಿದೆ.

error: Content is protected !!