Friday, December 5, 2025

ಬೆಂಗಳೂರಿನಿಂದ ಮುಂಬೈ, ದೆಹಲಿಗೆ ಇಂದು ಮಧ್ಯರಾತ್ರಿವರೆಗೂ ಇಂಡಿಗೋ ವಿಮಾನಗಳ ಹಾರಾಟ ರದ್ದು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಳೆದ ನಾಲ್ಕು ದಿನಗಳಿಂದ ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಶುಕ್ರವಾರ ಕೂಡ ವಿವಿಧ ಏರ್‌ಪೋರ್ಟ್‌ಗಳಲ್ಲಿ 550ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಈ ನಡುವೆ ಇಂಡಿಗೋ ವಿಮಾನಗಳ ಸೇವೆ ಬಗ್ಗೆ ಪ್ರಯಾಣಿಕರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (ಬಿಐಎಎಲ್‌) ಮಾಹಿತಿ ಹಂಚಿಕೊಂಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಐಎಎಲ್‌ ಮಾಹಿತಿ ನೀಡಿದ್ದು, ಡಿಸೆಂಬರ್ 5ರ ರಾತ್ರಿ 11:59 ಗಂಟೆಯವರೆಗೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ ಮತ್ತು ದೆಹಲಿಗೆ ತೆರಳುವ ಇಂಡಿಗೋ ವಿಮಾನಗಳು ರದ್ದುಗೊಂಡಿವೆ.

ಇಂಡಿಗೋ ವಿಮಾನಗಳ ಮೂಲಕ ಇತರ ಸ್ಥಳಗಳಿಗೆ ಪ್ರಯಾಣಿಸಲಿರುವ ಪ್ರಯಾಣಿಕರು, ದಯವಿಟ್ಟು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ ನೇರವಾಗಿ ವಿಮಾನಯಾನ ಸಂಸ್ಥೆಯೊಂದಿಗೆ ತಮ್ಮ ವಿಮಾನದ ಇತ್ತೀಚಿನ ಸ್ಥಿತಿಯನ್ನು ಪರಿಶೀಲಿಸುವಂತೆ ವಿನಂತಿ ಮಾಡುತ್ತೇವೆ. ಈ ಅಡಚಣೆಯಿಂದಾಗುವ ಅನಾನುಕೂಲತೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣಿಕರಿಗೆ ನೆರವಾಗಲು ಇಂಡಿಗೋ ಹಾಗೂ ಕಾರ್ಯಾಚರಣಾ ಸಹಯೋಗ ಹೊಂದಿರುವ ಇತರ ಸಂಸ್ಥೆಗಳ ಜೊತೆಗೆ ನಮ್ಮ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಬಿಐಎಎಲ್‌ ತಿಳಿಸಿದೆ.

ಪ್ರವಾಸ, ಬ್ಯುಸಿನೆಸ್ ಸೇರಿದಂತೆ ವಿವಿಧ ಕೆಲಸದ ನಿಮಿತ್ತ ತೆರಳಿದ್ದ ರಾಜ್ಯದಿಂದ ವಿವಿಧ ಸ್ಥಳಗಳಿಗೆ ತೆರಳಿದ್ದವರು ವಾಪಸ್ ಬರಲಾಗದೆ ಪರದಾಡುತ್ತಿದ್ದಾರೆ. ಅಲ್ಲದೆ ಏರ್​ಪೋರ್ಟ್​ಗಳಲ್ಲಿ ಇಂಡಿಗೋ ಪ್ರಯಾಣಿಕರ ಪರದಾಟ ಮುಂದುವರಿದಿದ್ದು, ಟಿಕೆಟ್ ಬುಕ್ ಮಾಡಿದವರು ಫ್ಲೈಟ್ ಸಿಗದೆ ಒದ್ದಾಡಿದ್ದಾರೆ. ಇಂಡಿಗೋ ಕೌಂಟರ್‌ಗಳ ಮುಂದೆ ಟಿಕೆಟ್ ಕ್ಯಾನ್ಸಲ್‌ಗೆ ಉದ್ದದ್ದ ಕ್ಯೂ ಇದೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ಸಮರ್ಪಕ ಮಾಹಿತಿ ಕೊಡುತ್ತಿಲ್ಲ ಎಂದು ಜನ ಆಕ್ರೋಶ ತೋರಿಸಿದ್ದಾರೆ.

error: Content is protected !!