Friday, December 5, 2025

ಅನಾಥರಿಗೆ ಶೇ.1 ರಷ್ಟು ಮೀಸಲಾತಿ ಐತಿಹಾಸಿಕ ಕ್ಷಣ: ‘ಮಹಾ’ ಸಿಎಂ ಫಡ್ನವೀಸ್ ಬಣ್ಣನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶಿಕ್ಷಣ ಮತ್ತು ಉದ್ಯೋಗದಲ್ಲಿ ಅನಾಥರಿಗೆ ಶೇಕಡಾ 1 ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನೀತಿಯನ್ನು “ಐತಿಹಾಸಿಕ” ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶುಕ್ರವಾರ ಬಣ್ಣಿಸಿದ್ದಾರೆ.

ಎರಡನೇ ಬಾರಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಫಡ್ನವೀಸ್ ಅವರು 2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ಹಿಂದಿನ ಅವಧಿಯಲ್ಲಿ ಪರಿಚಯಿಸಿದ ಈ ನೀತಿಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಇದು ಡಾ. ಬಿ. ಆರ್. ಅಂಬೇಡ್ಕರ್ ಅವರ ಸಮಾನ ಅವಕಾಶದ ತತ್ವದಲ್ಲಿ ಬೇರೂರಿದೆ ಎಂದು ಹೇಳಿದರು.

ಅನಾಥ ಯುವಕರಿಗೆ ಮೀಸಲಾತಿ ನೀಡುವ ನೀತಿಯು ತಮ್ಮ ಜೀವನದ ಅತ್ಯಂತ ಭಾವನಾತ್ಮಕವಾಗಿ ನಿರ್ಧಾರವಾಗಿದೆ. 862 ಫಲಾನುಭವಿಗಳು ಈಗ ಸ್ವಾವಲಂಬಿಗಳಾಗಿದ್ದಾರೆ ಮತ್ತು ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ಮಹಾ ಸಿಎಂ ತಿಳಿಸಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ವರ್ಷದ ನಂತರ, ನಡೆಯುತ್ತಿರುವ ಈ ಕಾರ್ಯಕ್ರಮ ಒಂದು ಸುಂದರ ಆರಂಭವಾಗಿದೆ. ಸರ್ಕಾರದಲ್ಲಿ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಅನೇಕ ಕೆಲಸಗಳು ಪೂರ್ಣಗೊಳ್ಳುತ್ತವೆ. ಆದರೆ ಕೆಲವು ನಿಜವಾಗಿಯೂ ಹೃದಯವನ್ನು ತಟ್ಟುತ್ತವೆ. ಅನಾಥ ಮಕ್ಕಳ ಮೀಸಲಾತಿ ಅಂತಹ ಒಂದು ನಿರ್ಧಾರವಾಗಿದೆ ಎಂದು ಅವರು ಹೇಳಿದರು.

ಅನಾಥರು, ಅಂಗವಿಕಲರು ಮತ್ತು ಇತರ ವಂಚಿತ ವರ್ಗಗಳು ಸಹ ಅವಕಾಶಗಳಿಗೆ ಅರ್ಹವಾಗಿವೆ. ಈ ಮೀಸಲಾತಿ ಅನೇಕ ಜನರ ಜೀವದಲ್ಲಿ ನಿಜವಾದ ಬದಲಾವಣೆಯನ್ನು ತಂದಿದೆ ಎಂದು ಅವರು ತಿಳಿಸಿದರು.

error: Content is protected !!