Friday, December 5, 2025

ರಷ್ಯಾ-ಭಾರತ ವ್ಯಾಪಾರ ವಹಿವಾಟು 100 ಬಿಲಿಯನ್ ಡಾಲರ್​ಗೆ ಹೆಚ್ಚಿಸುವ ಗುರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತದ ಭೇಟಿ ವೇಳೆ ಭಾರತ–ರಷ್ಯಾ ವ್ಯಾಪಾರ ವೇದಿಕೆ ಪ್ರಾರಂಭವಾಗಿದ್ದು ಉಭಯ ರಾಷ್ಟ್ರಗಳೂ ರಷ್ಯಾದೊಂದಿಗಿನ ಭಾರತದ ವ್ಯಾಪಾರ ಕೊರತೆ ಹೆಚ್ಚುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದು, ಭಾರತೀಯ ರಫ್ತುಗಳನ್ನು ಹೆಚ್ಚಿಸುವ ಮೂಲಕ ಅಸಮತೋಲನವನ್ನು ಸರಿಪಡಿಸಲು ಬದ್ಧವಾಗಿದೆ ಎಂದು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದಲ್ಲಿ 23ನೇ ಜಂಟಿ ವಾರ್ಷಿಕ ಶೃಂಗಸಭೆ ಕೂಡ ನಡೆದಿದ್ದು, ಜಾಗತಿಕ ರಾಜಕೀಯ ಅನಿಶ್ಚಿತ ಪರಿಸ್ಥಿತಿಯಲ್ಲಿ ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧವನ್ನು ಬಲಪಡಿಸಲು ಬದ್ಧತೆ ಇರುವುದನ್ನು ತೋರಿಸಲಾಯಿತು.

‘ಭಾರತ-ರಷ್ಯಾ: ನಂಬಿಕೆ ಮತ್ತು ಗೌರವದ ತಳಹದಿಯಲ್ಲಿ ದೀರ್ಘ ಸಮಯದ ಪ್ರಗತಿದಾಯಕ ಜೊತೆಗಾರಿಕೆ’ ಎನ್ನುವ ಶೀರ್ಷಿಕೆಯಲ್ಲಿ ಇಬ್ಬರೂ ನಾಯಕರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಎರಡು ದೇಶಗಳ ನಡುವಿನ ವ್ಯಾಪಾರ ವಹಿವಾಟನ್ನು 100 ಬಿಲಿಯನ್ ಡಾಲರ್​ಗೆ ಏರಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಈ ಹೇಳಿಕೆಯಲ್ಲಿ ನೀಡಲಾಗಿದೆ. ಸದ್ಯ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಸುಮಾರು 69 ಬಿಲಿಯನ್ ಡಾಲರ್​ನಷ್ಟು ಇದೆ.

ನೂರು ಬಿಲಿಯನ್ ಡಾಲರ್​ಗೆ ವ್ಯಾಪಾರ ವಹಿವಾಟು ಹೆಚ್ಚಿಸಲು ಎರಡೂ ದೇಶಗಳು ವಿವಿಧ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿವೆ. ಇದರ ಭಾಗವಾಗಿ 2030ರವರೆಗೆ ಆರ್ಥಿಕ ಸಹಕಾರ ಒಪ್ಪಂದಕ್ಕೂ ಸಹಿ ಹಾಕಲಾಗಿದೆ.

ನೂರು ಬಿಲಿಯನ್ ಡಾಲರ್ ಟ್ರೇಡಿಂಗ್ ಗುರಿ ಈಡೇರಬೇಕಾದರೆ ಭಾರತದಿಂದ ರಷ್ಯಾಗೆ ಹೆಚ್ಚೆಚ್ಚು ಉತ್ಪನ್ನಗಳ ರಫ್ತಾಗಬೇಕು. ಸದ್ಯ ರಷ್ಯಾ ಎದುರು ಭಾರತಕ್ಕೆ ವಿಪರೀತ ಟ್ರೇಡ್ ಡೆಫಿಸಿಟ್ ಇದೆ. ಎರಡೂ ದೇಶಗಳ ನಡುವಿನ ವ್ಯಾಪಾರದಲ್ಲಿ ರಷ್ಯಾದ ಪಾಲೇ ಬಹಳ ಹೆಚ್ಚಿದೆ. ಇಂದು ನಡೆದ ದ್ವಿಪಕ್ಷೀಯ ಸಭೆಯಲ್ಲಿ ಈ ಅಂಶಗಳನ್ನು ಆಳವಾಗಿ ಚರ್ಚಿಸಲಾಗಿದೆ.

ಫಾರ್ಮಾ, ಆಟೊಮೊಬೈಲ್, ಕೃಷಿ, ಹೈಟೆಕ್ನಾಲಜಿ ಉತ್ಪನ್ನಗಳನ್ನು ಭಾರತದಿಂದ ರಷ್ಯಾಗೆ ಸರಬರಾಜು ಮಾಡಲು ಅವಕಾಶ ಕೊಡಲಾಗಬಹುದು. ಇಂಥ ಕೆಲ ಪ್ರಮುಖ ಸೆಕ್ಟರ್​ಗಳನ್ನು ಅವಲೋಕಿಸಲಾಗಿದೆ.

error: Content is protected !!