ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಗೋ ಏರ್‌ಲೈನ್ಸ್‌ನಲ್ಲಿ ಉಂಟಾಗಿರುವ ಸಿಬ್ಬಂದಿ ಕೊರತೆಯ ಆವಾಂತರವು ಸತತ ಐದನೇ ದಿನವೂ ಮುಂದುವರಿದಿದ್ದು, ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಕಷ್ಟ ಹೇಳತೀರದ್ದಾಗಿದೆ. ನಿರ್ದಿಷ್ಟವಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ವಿಮಾನ ಹಾರಾಟ ರದ್ದಾಗಿ ಮತ್ತು ವಿಳಂಬವಾಗಿ ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಇಂಡಿಗೋದ ಒಂದು ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಲಕ್ನೋ, ಭೂಪಾಲ್ ಮತ್ತು ಜಮ್ಮು ಕಾಶ್ಮೀರ ಸೇರಿದಂತೆ ಅನೇಕ ಪ್ರಮುಖ ಮಾರ್ಗಗಳಲ್ಲಿ ವಿಮಾನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರು ಇಂಡಿಗೋ ಏರ್‌ಲೈನ್ಸ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. “ಏರ್‌ಪೋರ್ಟ್ ಸಿಬ್ಬಂದಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕೊನೆಯ ಕ್ಷಣದಲ್ಲಿ ವಿಮಾನ ಹಾರಾಟ ರದ್ದು ಎಂದು ಹೇಳುತ್ತಾರೆ. ‘ಎರಡು ದಿನದಲ್ಲಿ ಹಣ ಮರುಪಾವತಿ ಆಗುತ್ತದೆ’ ಎನ್ನುತ್ತಾರೆ. ನಮಗೆ ಹಣ ಮುಖ್ಯವಲ್ಲ, ವ್ಯವಹಾರ ಮತ್ತು ವೈಯಕ್ತಿಕ ಕೆಲಸಗಳ ಮೇಲೆ ಹೋಗಬೇಕಿರುತ್ತದೆ. ಬಳ್ಳಾರಿಯಿಂದ ಬಂದಿರುವ ಕುಟುಂಬವೊಂದು ಜೈಪುರಕ್ಕೆ ಹೋಗಬೇಕಿತ್ತು, ಆದರೆ ಇನ್ನೂ ವಿಮಾನದ ಬಗ್ಗೆ ಖಚಿತ ಮಾಹಿತಿಯಿಲ್ಲ” ಎಂದು ಗೋಳಾಡಿದ್ದಾರೆ. ಕೆಲವು ಕಡೆಗಳಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ಪ್ರತಿಭಟನೆಗಳನ್ನು ನಡೆಸಿ, ತಮ್ಮ ಸಂಕಷ್ಟವನ್ನು ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಇಂಡಿಗೋದಲ್ಲಿ ಉಂಟಾದ ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡಿರುವ ಇತರ ಏರ್‌ಲೈನ್‌ಗಳು ಏರ್ ಫೇರ್ ನಿಯಮಗಳನ್ನು ಗಾಳಿಗೆ ತೂರಿವೆ. ಮಹಾನಗರಗಳ ನಡುವೆ ಸಾಮಾನ್ಯವಾಗಿ ರೂ. 5,000 ದಿಂದ ರೂ. 8,000ಕ್ಕೆ ಸಿಗುತ್ತಿದ್ದ ಎಕಾನಮಿ ದರ್ಜೆಯ ಟಿಕೆಟ್‌ಗಳ ಬೆಲೆಯು 10 ಪಟ್ಟು ಹೆಚ್ಚಾಗಿ, ರೂ. 50,000 ದಿಂದ ರೂ. 80,000 ವರೆಗೆ ಏರಿಕೆಯಾಗಿದೆ.
ವಿರೋಧ ಪಕ್ಷಗಳು ಈ ಸಮಸ್ಯೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ನಂತರ, ವಿಮಾನಯಾನ ಸಚಿವಾಲಯವು ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಟಿಕೆಟ್ ದರಗಳ ಹೆಚ್ಚಳವನ್ನು ನಿಯಂತ್ರಿಸಲು ಮಧ್ಯಪ್ರವೇಶ ಮಾಡಿದೆ. ಆದರೂ, ಇಂಡಿಗೋದಲ್ಲಿ ಸಿಬ್ಬಂದಿ ಕೊರತೆಯಿಂದ ಸೃಷ್ಟಿಯಾದ ಈ ಭಾರಿ ಅವಾಂತರ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ.

