ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋದಲ್ಲಿ ಉಂಟಾಗಿರುವ ತಾಂತ್ರಿಕ/ಸಂಚಾಲನ ಸಮಸ್ಯೆಗಳ ಪರಿಣಾಮವಾಗಿ ಈಗ ವಿಮಾನ ಟಿಕೆಟ್‌ಗಳ ದರ ಮಾತ್ರವಲ್ಲದೆ, ಖಾಸಗಿ ಬಸ್‌ಗಳ ಪ್ರಯಾಣ ದರವೂ ಗಗನಕ್ಕೆ ಏರಿದೆ. ವಿಮಾನಯಾನದಲ್ಲಿ ಉಂಟಾದ ಅಡಚಣೆಯಿಂದಾಗಿ ಸಾವಿರಾರು ಪ್ರಯಾಣಿಕರು ಅನಿವಾರ್ಯವಾಗಿ ಬಸ್‌ಗಳತ್ತ ಮುಖ ಮಾಡಿದ್ದಾರೆ. ಇದೇ ಸಮಯವನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಆಪರೇಟರ್‌ಗಳು ದರವನ್ನು ಹಲವು ಪಟ್ಟು ಹೆಚ್ಚಿಸಿ ಪ್ರಯಾಣಿಕರನ್ನು ಶೋಷಿಸುತ್ತಿದ್ದಾರೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮುಂಬೈಗೆ ಬಸ್ ಪ್ರಯಾಣ ದರವು 1,500 ರಿಂದ 2,500 ಇರುತ್ತಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ದರವು ಬರೋಬ್ಬರಿ 4,500 ರಿಂದ ₹10,000 ವರೆಗೆ ತಲುಪಿದೆ! ಅದೇ ರೀತಿ, ಬೆಂಗಳೂರು-ಪುಣೆ ನಡುವಿನ ಪ್ರಯಾಣ ದರವು ಹಿಂದೆ 1,200 ರಿಂದ 1,600 ಇತ್ತು. ಆದರೆ ಈಗ ಈ ದರವು 3,500 ರಿಂದ 6,000 ಕ್ಕೆ ಏರಿಕೆಯಾಗಿದೆ.
ಇಂಡಿಗೋ ಸಮಸ್ಯೆ ಎದುರಿಸುತ್ತಿದ್ದಂತೆ, ಇತರ ವಿಮಾನಯಾನ ಸಂಸ್ಥೆಗಳೂ ತಮ್ಮ ಟಿಕೆಟ್‌ಗಳ ಬೆಲೆಯನ್ನು ಮೂರುಪಟ್ಟು ಹೆಚ್ಚಿಸಿವೆ. ವಿದೇಶಗಳಿಗೆ ಹೋಗುವ ಟಿಕೆಟ್ ದರಕ್ಕಿಂತಲೂ ದೇಶದೊಳಗೆ ಸಂಚರಿಸುವ ವಿಮಾನ ಟಿಕೆಟ್‌ಗಳು ದುಬಾರಿಯಾಗಿವೆ ಎಂದು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ವಿಮಾನ ಕಂಪನಿಗಳು ಈ ಪರಿಸ್ಥಿತಿಯನ್ನು ಲಾಭದಾಯಕವಾಗಿ ಬಳಸಿಕೊಂಡ ಬೆನ್ನಲ್ಲೇ, ಖಾಸಗಿ ಬಸ್ಸುಗಳು ಸಹ ಈಗ ಪ್ರಯಾಣಿಕರನ್ನು ‘ಸುಲಿಗೆ’ ಮಾಡಲು ಮುಂದಾಗಿರುವುದು ಜನರಲ್ಲಿ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಒಂದು ಕಡೆಯಿಂದ ವಿಮಾನ ಸಮಸ್ಯೆ, ಇನ್ನೊಂದು ಕಡೆಯಿಂದ ಬಸ್ ದರ ಹೆಚ್ಚಳದ ಇಕ್ಕಟ್ಟಿನಲ್ಲಿ ಪ್ರಯಾಣಿಕರು ಸಿಲುಕಿದ್ದಾರೆ.

