ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಕ್ತಿಭಾವದ ಪ್ರಯಾಣ ಕ್ಷಣಾರ್ಧದಲ್ಲಿ ಶೋಕವಾಗಿ ಮಾರ್ಪಟ್ಟ ಘಟನೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ನಡೆದಿದೆ. ಇಂದು ಮುಂಜಾನೆ ಸುಮಾರು 2.15ರ ವೇಳೆಗೆ, ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಡಿದು, ಐವರು ಭಕ್ತರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ವಂಗರ ರಾಮಕೃಷ್ಣ (51), ಮಾರ್ಪಿನ ಅಪ್ಪಲನಾಯ್ಡು (33), ರಾಮು (50) ಮತ್ತು ಮರುಪಲ್ಲಿಯ ಬಂಡಾರು ಚಂದ್ರರಾವ್ (35) ಎಂದು ಗುರುತಿಸಲಾಗಿದೆ. ಇದೇ ಅಪಘಾತದಲ್ಲಿ ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ರಾಮನಾಥಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ವಿಜಯನಗರ ಹಾಗೂ ವಿಶಾಖಪಟ್ಟಣಂ ಜಿಲ್ಲೆಗಳ ಮೂಲದ ಅಯ್ಯಪ್ಪ ಭಕ್ತರು ಶಬರಿಮಲೆ ದರ್ಶನ ಮುಗಿಸಿ, ರಾಮೇಶ್ವರಂ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಅಪಘಾತಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

