Saturday, December 6, 2025

ಆರನೇ ಗ್ಯಾರಂಟಿ ‘ಭೂಮಿ ಗ್ಯಾರಂಟಿ’ ಅನುಷ್ಠಾನ: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಸರ್ಕಾರದ ಸಾಧನೆಗಳಿಗೆ ಜನರ ಕಣ್ಣುಗಳೇ ಸಾಕ್ಷಿ. ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ನಮ್ಮ ಸರ್ಕಾರದ ಆರನೇ ಗ್ಯಾರಂಟಿ ʼಭೂಮಿ ಗ್ಯಾರಂಟಿʼ ರಾಜ್ಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ಅವರು ಎಲ್ಲರಿಗೂ ತಮ್ಮ ಆಸ್ತಿ ದಾಖಲೆ ಭದ್ರಪಡಿಸಿಕೊಳ್ಳುವ ಅವಕಾಶ ಕಲ್ಪಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಹಾಸನದಲ್ಲಿ ಶನಿವಾರ ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ದೇವರು ವರ ಹಾಗೂ ಶಾಪ ಎರಡನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಈ ಅವಕಾಶದಲ್ಲಿ ಜನರ ಹೃದಯ ಗೆಲ್ಲಲು ಅನೇಕ ಯೋಜನೆ, ಕಾರ್ಯಕ್ರಮ ರೂಪಿಸಿದ್ದೇವೆ. ಬೆಲೆ ಏರಿಕೆಯಿಂದ ಆರ್ಥಿಕವಾಗಿ ತೊಂದರೆ ಅನುಭವಿಸಿದ್ದ ನಿಮಗೆ ಉಚಿತ ಬಸ್ ಪ್ರಯಾಣ, 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಬಡ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ, 10 ಕೆ.ಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ನಾವು ಪಕ್ಷಬೇಧ ಮಾಡದೆ ಯೋಜನೆ ನೀಡುತ್ತಿದ್ದೇವೆ ಎಂದು ವಿವರಿಸಿದರು.

ಇದು ಅಭಿವೃದ್ಧಿಯ ಸರ್ಕಾರ. ಸರ್ವರಿಗೂ ಸಮಪಾಲು, ಸಮಬಾಳು, ಸರ್ವರಿಗೂ ನೆಮ್ಮದಿ, ಸರ್ವರಿಗೂ ಅಭಿವೃದ್ಧಿ ನೀಡುವ ಸರ್ಕಾರ ನಮ್ಮದು. ನಾವು ಒಂದು ನಿಮಿಷದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಒಂದು ನಿಮಿಷದಲ್ಲಿ ಜನರ ಅಭಿವೃದ್ಧಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ನಾವು ಅದರಂತೆ ಕೆಲಸ ಮಾಡುತ್ತಿದ್ದೇವೆ ಎಂದರು.

ತಾಯಿ ಹಾಸನಾಂಬೆ ದೇವಿಗೆ ನಮಿಸಲು ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಈ ಜಿಲ್ಲೆಗೆ ಬಂದಿದ್ದೆವು. ಕೃಷ್ಣ ಬೈರೇಗೌಡರು ಈ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ನಂತರ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಜನರು ಬಂದು ದೇವಿ ದರುಶನ ಪಡೆದಿದ್ದಾರೆ. ಎರಡು ಮೂರು ತಿಂಗಳ ಹಿಂದೆ ಅರಸೀಕೆರೆಗೆ ಹೋದಾಗ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ದರುಶನ ಮಾಡುವ ಭಾಗ್ಯ ದೊರೆತಿತ್ತು ಎಂದರು.

ನಾವು ಹುಟ್ಟುವಾಗ ಖಾಲಿ ಕೈಯಲ್ಲಿ ಬರುತ್ತೇವೆ. ಹೋಗುವಾಗ ಪಾಪ ಪುಣ್ಯಗಳೊಂದಿಗೆ ಹೋಗುತ್ತೇವೆ. ಅದೇ ರೀತಿ ನಮ್ಮ ಸರ್ಕಾರ ಪ್ರತಿ ಹಂತದಲ್ಲೂ ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಬಂದಾಗ ನಾನು ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು. ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದರು.

ನಮ್ಮ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ
ಮನುಷ್ಯನ ಬದುಕು ಶಾಶ್ವತವಲ್ಲ, ನಾವು ಬಿಟ್ಟು ಹೋಗುವ ಕೆಲಸಗಳು ಮಾತ್ರ ಶಾಶ್ವತ. ಕೃಷ್ಣ ಬೈರೇಗೌಡರ ಮುಖಂಡತ್ವದಲ್ಲಿ ನಮ್ಮ ಸರ್ಕಾರದ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ ರಾಜ್ಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ಎಲ್ಲರಿಗೂ ತಮ್ಮ ಆಸ್ತಿ ದಾಖಲೆ ಭದ್ರಪಡಿಸಿಕೊಳ್ಳುವ ಅವಕಾಶ ಕಲ್ಪಿಸಿದ್ದಾರೆ. ಹಾಸನದಲ್ಲಿ ಅನೇಕ ಯೋಜನೆ ರೂಪಿಸುತ್ತಿದ್ದಾರೆ. “ನಮ್ಮ ಮಾತು ನಿಧಾನವಾಗಿರಬೇಕು, ಕಾಯಕ ಪ್ರಧಾನವಾಗಿರಬೇಕು” ಎಂದು ಹಿರಿಯರು ಹೇಳಿದ್ದಾರೆ ಎಂದರು.

ಕೃಷ್ಣ ಬೈರೇಗೌಡರು ಸುಮಾರು 50 ಸಾವಿರ ಜನರಿಗೆ ಅವರ ಆಸ್ತಿ ದಾಖಲೆಗಳನ್ನು ಸರಿಮಾಡಿ ಕೊಟ್ಟಿದ್ದಾರೆ. ವಿಜಯನಗರದಲ್ಲಿ 1,11,11,111 ಜನ ತಾಂಡಾ ಜನರಿಗೆ ತಮ್ಮ ಆಸ್ತಿ ದಾಖಲೆಗಳನ್ನು ನೀಡಿದ್ದೇವೆ. ನಮ್ಮ ಹುಟ್ಟು ನಮ್ಮ ಕೈಯಲ್ಲಿ ಇಲ್ಲ, ಆದರೆ ನಾವು ಮುಟ್ಟಬೇಕಾದ ಗುರಿ ನಮ್ಮ ಕೈಯಲ್ಲೇ ಇದೆ. ನಾವು ಈಗಾಗಲೇ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಆಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದು, ಇದೇ ಮಾರ್ಗದಲ್ಲಿ ಜನರ ಕಲ್ಯಾಣ ಮಾಡಿಕೊಂಡು ಈ ಸರ್ಕಾರ ಮುಂದೆ ಸಾಗಲಿದೆ ಎಂದು ಭರವಸೆ ನೀಡಿದರು.

error: Content is protected !!