ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಡಾಕಾದ ನ್ಯಾಯಮಂಡಳಿ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಆದ್ರೆ ಶೇಖ್ ಹಸೀನಾ ಭಾರತದಲ್ಲಿ ವಾಸ್ತವ್ಯ ಹೂಡಿದ್ದು,ಈ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರತಿಕ್ರಿಯಿಸಿದ್ದು, ಶೇಖ್ ಹಸೀನಾ ಅವರು ಪರಿಸ್ಥಿತಿಗಳ ಪ್ರಭಾವದಿಂದ ನಮ್ಮ ದೇಶಕ್ಕೆ ಬಂದಿರಬಹುದು. ಅದು ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದಾರೆ.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ನಂತರ ನೂರಾರು ಮಂದಿ ಪ್ರಾಣ ಕಳೆದುಕೊಂಡು, ಸಾವಿರಾರು ಮಂದಿ ಗಾಯಗೊಂಡರು. ಪ್ರತಿಭಟನೆ ವಿರುದ್ಧ ಹಸೀನಾ ನೇತೃತ್ವದ ಸರ್ಕಾರ ಉಗ್ರವಾಗಿ ದಮನ ಕೈಗೊಂಡಿತು ಎಂದು ಆರೋಪಿಸಲಾಗಿದೆ. ಈ ಸಂಬಂಧ ಅವರಿಗೆ ಢಾಕಾದ ವಿಶೇಷ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತು.
ಇದೀಗ ಮರಣದಂಡನೆ ಶಿಕ್ಷೆಗೆ ಒಳಗಾಗಿರುವುದರಿಂದ ಅವರು ಭಾರತದಲ್ಲಿಯೇ ಇನ್ನೂ ಎಷ್ಟು ಸಮಯ ವಾಸ್ತವ್ಯ ಹೂಡಬಹುದು ಎಂಬುದರ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ. ಶೆಕ್ ಹಸೀನಾ ಭಾರತವನ್ನು ತೊರೆಯುವುದು ಅಥವಾ ಇಲ್ಲೇ ಇರುವುದು ಅವರ ವೈಯಕ್ತಿಕ ನಿರ್ಧಾರ. ಅವರು ಎಷ್ಟು ಸಮಯ ಬೇಕಾದರೂ ಇಲ್ಲಿಯೇ ಇರಬಹುದು ಎಂದು ಹೇಳಿದ್ದಾರೆ.
ಆ ಪರಿಸ್ಥಿತಿಯು ಅವರ ಮೇಲೆ ಸ್ಪಷ್ಟವಾಗಿ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ಅದು ಕೂಡ ಅವರು (ಶೇಖ್ ಹಸೀನಾ) ತಮ್ಮ ಮನಸ್ಸನ್ನು ನಿರ್ಧರಿಸಬೇಕಾದ ವಿಷಯ ಎಂದು ಹೇಳಿದರು.
ದೆಹಲಿ ಮತ್ತು ಢಾಕಾ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ಜೈಶಂಕರ್, ನೆರೆಯ ದೇಶದಲ್ಲಿ ವಿಶ್ವಾಸಾರ್ಹ ಪ್ರಜಾಪ್ರಭುತ್ವ ಪ್ರಕ್ರಿಯೆಯ ಅಗತ್ಯದ ಬಗ್ಗೆ ಭಾರತದ ನಿಲುವನ್ನು ಒತ್ತಿ ಹೇಳಿದರು.
ಬಾಂಗ್ಲಾದೇಶದ ಹಿಂದಿನ ರಾಜಕೀಯ ಸಮಸ್ಯೆಗಳನ್ನು ಉಲ್ಲೇಖಿಸಿದ ಜೈಶಂಕರ್, ಬಾಂಗ್ಲಾದೇಶದ ಜನರು, ವಿಶೇಷವಾಗಿ ಈಗ ಅಧಿಕಾರದಲ್ಲಿರುವವರು, ಈ ಹಿಂದೆ ಚುನಾವಣೆಗಳನ್ನು ಹೇಗೆ ನಡೆಸಲಾಗುತ್ತಿತ್ತು ಎಂಬುದರ ಬಗ್ಗೆ ಸಮಸ್ಯೆಯನ್ನು ಹೊಂದಿದ್ದರು ಎಂದು ನಾವು ಕೇಳಿದ್ದೇವೆ. ಹಾಗಾದರೆ, ಸಮಸ್ಯೆ ಚುನಾವಣೆಯದ್ದೇ ಆಗಿದ್ದರೆ, ಮೊದಲ ಕೆಲಸ ನ್ಯಾಯಸಮ್ಮತವಾದ ಚುನಾವಣೆ ನಡೆಸುವುದಾಗಿರುತ್ತದೆ ಎಂದು ಹೇಳಿದರು.
ಭಾರತವು ತನ್ನ ನೆರೆಯ ರಾಷ್ಟ್ರಕ್ಕೆ ಹೊಂದಿರುವ ಪ್ರಜಾಸತ್ತಾತ್ಮಕ ಆದ್ಯತೆಯನ್ನು ಒತ್ತಿ ಹೇಳಿದರು. ನಾವು ಬಾಂಗ್ಲಾದೇಶಕ್ಕೆ ಶುಭ ಹಾರೈಸುತ್ತೇವೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಯಾವುದೇ ಪ್ರಜಾಸತ್ತಾತ್ಮಕ ದೇಶವು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಜನರ ಇಚ್ಛೆಯನ್ನು ಖಚಿತಪಡಿಸಿಕೊಳ್ಳುವುದನ್ನು ನೋಡಲು ಬಯಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಪ್ರಕ್ರಿಯೆಯಿಂದ ಹೊರಬರುವ ಯಾವುದೇ ವಿಷಯವು ಸಂಬಂಧದ ಬಗ್ಗೆ ಸಮತೋಲಿತ ಮತ್ತು ಪ್ರಬುದ್ಧ ದೃಷ್ಟಿಕೋನವನ್ನು ಹೊಂದಿರುತ್ತದೆ. ಸ್ಥಿತಿಗತಿ ಸುಧಾರಿಸುತ್ತದೆ ಎಂಬ ಬಗ್ಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.

