ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನ ಪ್ರಯಾಣದ ಅಸ್ತವ್ಯಸ್ತತೆ ದೇಶದ ಹಲವು ನಗರಗಳಲ್ಲಿ ಜನಜೀವನಕ್ಕೆ ಅಡ್ಡಿಪಡಿಸಿರುವ ನಡುವೆ, ಸಾವಿರಾರು ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಸಮಯೋಚಿತ ನೆರವಿಗೆ ನಿಂತಿದೆ. ಇಂಡಿಗೋ ಏರ್‌ಲೈನ್ಸ್‌ನಲ್ಲಿ ಮುಂದುವರಿದ ಕಾರ್ಯಾಚರಣಾ ಸಮಸ್ಯೆಯಿಂದ ವಿಮಾನ ರದ್ದತಿಗಳು ಹಾಗೂ ವಿಳಂಬಗಳು ಹೆಚ್ಚಾಗಿದ್ದು, ಟಿಕೆಟ್ ದರಗಳೂ ಭಾರಿಯಾಗಿ ಏರಿವೆ. ಈ ಸ್ಥಿತಿಯನ್ನು ಗಮನಿಸಿದ ರೈಲ್ವೇ ಇಲಾಖೆ, ತ್ವರಿತ ಕ್ರಮವಾಗಿ ದೇಶಾದ್ಯಂತ ವಿಶೇಷ ರೈಲುಗಳನ್ನು ಪರಿಚಯಿಸಿ ಪ್ರಯಾಣಿಕರ ಸಂಕಷ್ಟಕ್ಕೆ ಪರಿಹಾರ ನೀಡುತ್ತಿದೆ.
ರೈಲ್ವೇ ಮೂಲಗಳ ಪ್ರಕಾರ, ಇಂದಿನಿಂದ ಮೂರು ದಿನಗಳ ಕಾಲ ಒಟ್ಟು 89 ವಿಶೇಷ ರೈಲುಗಳು ವಿವಿಧ ಪ್ರಮುಖ ನಗರಗಳ ನಡುವೆ ಸಂಚರಿಸಲಿವೆ. ದೆಹಲಿ, ಮುಂಬೈ, ಕೊಲ್ಕತ್ತಾ, ಅಹಮದಾಬಾದ್, ಚೆನ್ನೈ, ಹೈದರಾಬಾದ್ ಸೇರಿದಂತೆ ಪ್ರಮುಖ ಕೇಂದ್ರಗಳನ್ನು ಈ ಸೇವೆಗಳು ಸಂಪರ್ಕಿಸಲಿದೆ. ಇಂಡಿಗೋದ ಪೈಲಟ್ ಕೊರತೆಯಿಂದ ಪ್ರತಿದಿನ 30ರಿಂದ 50 ವಿಮಾನಗಳು ರದ್ದಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರದಿಂದಲೂ ವಿಶೇಷ ಸೇವೆಗಳು ಆರಂಭವಾಗಿದ್ದು, ಚೆನ್ನೈ, ಪುಣೆ, ಎರ್ನಾಕುಲಂ, ವಿಶಾಖಪಟ್ಟಣಂ, ದೆಹಲಿ ಹಾಗೂ ಕೊಲ್ಕತ್ತಾ ಮಾರ್ಗಗಳಲ್ಲಿ ರೈಲುಗಳು ಸಂಚರಿಸುತ್ತಿವೆ. ಎಲ್ಲಾ ರೈಲುಗಳಲ್ಲಿ ಎಸಿ ಕೋಚ್‌ಗಳಿದ್ದು, ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಆಪ್‌ನಲ್ಲಿ ತಕ್ಷಣದ ಬುಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.
ವಿಮಾನ ಟಿಕೆಟ್ ದರಗಳು ಶೇಕಡಾ 50ರಷ್ಟು ಏರಿಕೆಯಾದ ವೇಳೆ, ರೈಲುಗಳ ಸ್ತಿರ ದರಗಳು ಜನಸಾಮಾನ್ಯರಿಗೆ ದೊಡ್ಡ ಸಮಾಧಾನ ತಂದಿವೆ. ಇಂಡಿಗೋದ ಬಿಕ್ಕಟ್ಟು ಮುಂದುವರಿದರೆ ಇನ್ನಷ್ಟು ವಿಶೇಷ ರೈಲುಗಳನ್ನು ಓಡಿಸುವ ಸಿದ್ಧತೆ ಇದೆ ಎಂದು ರೈಲ್ವೇ ಅಧಿಕಾರಿಗಳು ಸೂಚಿಸಿದ್ದಾರೆ.

