ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ–ಪಾಕಿಸ್ತಾನ ಗಡಿ ಮೀರಿದ ವೈವಾಹಿಕ ವಿವಾದವೊಂದು ಇದೀಗ ರಾಷ್ಟ್ರದ ಗಮನ ಸೆಳೆದಿದೆ. ಪಾಕಿಸ್ತಾನದ ಕರಾಚಿ ನಿವಾಸಿ ನಿಕಿತಾ ತಮ್ಮ ಪತಿ ವಿಕ್ರಮ್ ನಾಗದೇವ್ ವಿರುದ್ಧ ಗಂಭೀರ ಆರೋಪಗಳನ್ನು ಮುಂದಿಟ್ಟು, ಪ್ರಧಾನಿ ನರೇಂದ್ರ ಮೋದಿಗೆ ವೀಡಿಯೊ ಸಂದೇಶದ ಮೂಲಕ ಮನವಿ ಮಾಡಿದ್ದಾರೆ. ತಮ್ಮ ಪತಿಯನ್ನು ದೆಹಲಿಯಿಂದ ಪಾಕಿಸ್ತಾನಕ್ಕೆ ಮರಳಿಸುವಂತೆ ಅವರು ಆಗ್ರಹಿಸಿದ್ದಾರೆ.
ನಿಕಿತಾ ಹೇಳುವಂತೆ, ಜನವರಿ 26, 2020ರಂದು ಕರಾಚಿಯಲ್ಲಿ ಹಿಂದೂ ಸಂಪ್ರದಾಯದಂತೆ ಇಬ್ಬರ ಮದುವೆ ನೆರವೇರಿತ್ತು. ನಂತರ ವಿಕ್ರಮ್ ನಾಗದೇವ್ ದೀರ್ಘಾವಧಿ ವೀಸಾದ ಮೇಲೆ ಇಂದೋರ್‌ನಲ್ಲಿ ವಾಸವಾಗಿದ್ದು, ಫೆಬ್ರವರಿ 26ರಂದು ನಿಕಿತಾ ಅವರನ್ನು ಭಾರತಕ್ಕೆ ಕರೆಸಿಕೊಂಡಿದ್ದರು. ಆದರೆ ಜುಲೈ 9ರಂದು ವೀಸಾ ಸಮಸ್ಯೆ ನೆಪದಲ್ಲಿ ಅವರನ್ನು ಅಟ್ಟಾರಿ ಗಡಿಯ ಮೂಲಕ ಬಲವಂತವಾಗಿ ಪಾಕಿಸ್ತಾನಕ್ಕೆ ಹಿಂದಿರುಗಿಸಲಾಯಿತು ಎಂಬ ಆರೋಪ ಮಾಡಿದ್ದಾರೆ.
ನಂತರ ಪತಿ ತಮ್ಮನ್ನು ಭಾರತಕ್ಕೆ ಕರೆತರಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ನಿಕಿತಾ ದೂರಿದ್ದಾರೆ. ತಾವು ಮನವಿ ಮಾಡಿದರೂ ಪ್ರತಿಬಾರಿಯೂ ನಿರಾಕರಣೆ ಎದುರಿಸಬೇಕಾಯಿತು ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ವಿಕ್ರಮ್ ನಾಗದೇವ್ ದೆಹಲಿಯಲ್ಲಿ ಮತ್ತೊಂದು ಮದುವೆಗೆ ಸಿದ್ಧತೆ ನಡೆಸುತ್ತಿದ್ದಾನೆ ಎಂಬ ಮಾಹಿತಿ ತಿಳಿದ ಬಳಿಕ ನ್ಯಾಯಕ್ಕಾಗಿ ಪ್ರಧಾನಿ ಮೊರೆ ಹೋಗಬೇಕಾಯಿತು ಎಂದು ನಿಕಿತಾ ಹೇಳಿದ್ದಾರೆ.
ಜನವರಿ 27, 2025ರಂದು ಈ ಸಂಬಂಧ ಲಿಖಿತ ದೂರು ದಾಖಲಾಗಿದ್ದು, ಇಬ್ಬರೂ ಭಾರತೀಯ ನಾಗರಿಕರಲ್ಲದ ಕಾರಣ ಪ್ರಕರಣ ಪಾಕಿಸ್ತಾನದ ನ್ಯಾಯವ್ಯಾಪ್ತಿಗೆ ಸೇರಿದೆ ಎಂದು ಸಿಂಧಿ ಮಧ್ಯಸ್ಥಿಕೆ ಕೇಂದ್ರ ಸ್ಪಷ್ಟಪಡಿಸಿದೆ. ಅಲ್ಲದೆ ವಿಕ್ರಮ್ ನಾಗದೇವ್ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲು ಶಿಫಾರಸು ಮಾಡಲಾಗಿದೆ ಎಂದು ವರದಿಯಾಗಿದೆ.

