ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಣ್ಣ ಕುಟುಂಬ ವಿವಾದವೊಂದು ಕ್ರೂರ ಹತ್ಯೆಯಾಗಿ ಅಂತ್ಯಗೊಂಡ ಘಟನೆ ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ. ಪತ್ನಿಯನ್ನು ಮನೆಗೆ ಕರೆತರುವ ಯತ್ನದ ನಡುವೆ, ತಂದೆ–ತಾಯಿಯ ಕೈಯಿಂದಲೇ ಪುತ್ರ ಪ್ರಾಣ ಕಳೆದುಕೊಂಡಿದ್ದಾನೆ.
ಮೃತನನ್ನು ಸಿಮ್ರಂಜಂಗ್ ಸಿಂಗ್ ಎಂದು ಗುರುತಿಸಲಾಗಿದೆ. ಪತ್ನಿ ನವಪ್ರೀತ್ ಕೌರ್ ಕೆಲ ಸಮಯದಿಂದ ಮಗನೊಟ್ಟಿಗೆ ತವರು ಮನೆಯಲ್ಲಿ ವಾಸಿಸುತ್ತಿದ್ದರು. ದಾಂಪತ್ಯ ಜೀವನದಲ್ಲಿ ಉಂಟಾದ ಗೊಂದಲ, ಜಗಳಗಳು ಆಕೆಯನ್ನು ತವರುಮನೆ ಸೇರುವಂತೆ ಮಾಡಿದ್ದವು. ಇದೇ ವಿಚಾರವನ್ನು ಬಗೆಹರಿಸಿ ಪತ್ನಿ ಹಾಗೂ ಮಗು ಮನೆಗೆ ವಾಪಸ್ ಬರಬೇಕೆಂದು ಸಿಮ್ರಂಜಂಗ್ ಪೋಷಕರ ಮೇಲೆ ಒತ್ತಡ ಹಾಕಿದ್ದನು. ಆದರೆ, ನವಪ್ರೀತ್ ಮತ್ತೆ ಮನೆಗೆ ಬರುವುದು ಅತ್ತೆ-ಮಾವನಿಗೆ ಒಪ್ಪಿಗೆಯಾಗಿರಲಿಲ್ಲ. ಮಗನಿಗೆ ಮರುಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರಿಂದ, ಕುಟುಂಬದೊಳಗಿನ ಉದ್ವಿಗ್ನತೆ ಹೆಚ್ಚುತ್ತಲೇ ಬಂದಿತ್ತು.
ಈ ಹಿನ್ನೆಲೆ ಭಾನುವಾರ ಬೆಳಗ್ಗೆ ಗಂಭೀರ ವಾಗ್ವಾದಕ್ಕೆ ಕಾರಣವಾಯಿತು. ಮಾತಿನ ಜಗಳ ಕ್ಷಣಾರ್ಧದಲ್ಲಿ ಹಿಂಸಾತ್ಮಕ ರೂಪ ಪಡೆದು, ಕೋಪದ ಭರದಲ್ಲಿ ಸಿಮ್ರಂಜಂಗ್ ಪೋಷಕರು ಆತನ ಮೇಲೆ ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ. ತಲೆಗೆ ತೀವ್ರ ಗಾಯಗಳಾಗಿ ಸಿಮ್ರಂಜಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಜ್ನಾಲಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತಂದೆಯನ್ನು ಬಂಧಿಸಲಾಗಿದೆ. ತಾಯಿ ಪರಾರಿಯಾಗಿದ್ದು, ತನಿಖೆ ಮುಂದುವರಿದಿದೆ.

