ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ನಡುವಿನ ವಿವಾಹ ನಿಶ್ಚಯ ರದ್ದಾಗಿರುವುದು ಅಧಿಕೃತವಾಗಿ ದೃಢಪಟ್ಟಿದೆ.
ಈ ಸಂಬಂಧ ಪಲಾಶ್ ಮುಚ್ಚಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ಜೀವನದಲ್ಲಿ ಮುಂದುವರಿಯಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ತಮ್ಮ ಸಂದೇಶದಲ್ಲಿ, ಆಧಾರರಹಿತ ವದಂತಿಗಳು ಸಾರ್ವಜನಿಕವಾಗಿ ಹರಡುತ್ತಿರುವುದು ತೀವ್ರ ಮಾನಸಿಕ ನೋವು ತಂದಿದೆ ಎಂದಿರುವ ಪಲಾಶ್, ಇದು ತಮ್ಮ ಜೀವನದ ಅತ್ಯಂತ ಕಠಿಣ ಹಂತವಾಗಿದೆ, ಸುಳ್ಳು ಆರೋಪಗಳು ಹಾಗೂ ಮಾನಹಾನಿಕರ ವಿಷಯಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಅವರು, ಈ ಸಂದರ್ಭದಲ್ಲಿ ತಮ್ಮ ಬೆಂಬಲಕ್ಕೆ ನಿಂತವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇದೀಗ ಸಂಬಂಧ ಅಂತ್ಯಗೊಂಡಿರುವುದು ಸ್ಪಷ್ಟವಾಗಿದ್ದು, ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದ ಕಡೆ ಗಮನ ಹರಿಸಲು ಮುಂದಾಗಿದ್ದಾರೆ ಎಂಬ ಸಂದೇಶ ಸಾರ್ವಜನಿಕವಾಗಿ ಸ್ಪಷ್ಟವಾಗಿ ಹೊರಬಿದ್ದಿದೆ.

