Wednesday, December 10, 2025

‘ವಂದೇ ಮಾತರಂ’ಗೆ 150 ವರ್ಷದ ಸಂಭ್ರಮ: ನಾಳೆ ಲೋಕಸಭೆಯಲ್ಲಿ ವಿಶೇಷ ಚರ್ಚೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ನಾಳೆ (ಡಿಸೆಂಬರ್ 8) ವಿಶೇಷ ಚರ್ಚೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ 12 ಗಂಟೆಗೆ ಚರ್ಚೆ ಆರಂಭಿಸಲಿದ್ದು, ಚರ್ಚೆಯ ಕೊನೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಲಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಚರ್ಚೆಯಲ್ಲಿ ಭಾಗವಹಿಸಲು ಮೂರು ಗಂಟೆ ಸಮಯ ನಿಗದಿಪಡಿಸಲಾಗಿದೆ. ಡಿ.9ರ ಮಂಗಳವಾರ ರಾಜ್ಯಸಭೆಯಲ್ಲಿಯೂ ಚರ್ಚೆ ನಡೆಯಲಿದೆ. ಒಟ್ಟು 10 ಗಂಟೆ ವಂದೇ ಮಾತರಂ ಕುರಿತು ಚರ್ಚೆಯಾಗಲಿದೆ.

ಈ ಚರ್ಚೆಗಳು ವಂದೇ ಮಾತರಂ ಗೀತೆಯ 150ನೇ ವರ್ಷದ ಸಂಭ್ರಮ ಮತ್ತು ಪರಂಪರೆಯನ್ನು ಸ್ಮರಿಸಲಿವೆ.

ಕಾಂಗ್ರೆಸ್‌ ಸದಸ್ಯರಾದ ಪ್ರಿಯಾಂಕಾ ಗಾಂಧಿ ವಾದ್ರಾ, ಗೌರವ್ ಗೊಗೊಯ್, ದೀಪೇಂದರ್ ಹೂಡಾ, ಬಿಮೋಲ್ ಅಕೋಯಿಜಮ್, ಪ್ರಣಿತಿ ಶಿಂಧೆ, ಪ್ರಶಾಂತ್ ಪಡೋಲೆ, ಚಾಮಲಾ ರೆಡ್ಡಿ ಮತ್ತು ಜ್ಯೋತ್ಸ್ನಾ ಮಹಂತ್ ಅವರು ಲೋಕಸಭೆಯಲ್ಲಿ ಮಾತನಾಡಲಿದ್ದಾರೆ.

ನ.7ರಂದು ವಂದೇ ಮಾತರಂ (ತಾಯಿ ನಿನಗೆ ನಮಸ್ಕರಿಸುತ್ತೇನೆ)ನ 150ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ. ಬಂಕಿಮ್ ಚಂದ್ರ ಚಟರ್ಜಿ ರಚಿಸಿದ ‘ವಂದೇ ಮಾತರಂ’ 1875ರ ನವೆಂಬರ್ 7ರಂದು ಮೊದಲ ಬಾರಿಗೆ ಸಾಹಿತ್ಯ ಪತ್ರಿಕೆ ಬಂಗದರ್ಶನ್‌ನಲ್ಲಿ ಪ್ರಕಟವಾಗಿತ್ತು. ನಂತರ, ಚಟರ್ಜಿ ಅವರು 1882ರಲ್ಲಿ ಪ್ರಕಟವಾದ ತಮ್ಮ ಅಮರ ಕಾದಂಬರಿ ‘ಆನಂದಮಠ’ದಲ್ಲಿ ಈ ಸ್ತುತಿಗೀತೆಯನ್ನು ಸೇರಿಸಿದ್ದರು. ರವೀಂದ್ರನಾಥ ಟ್ಯಾಗೋರ್ ಈ ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ವಂದೇ ಮಾತರಂ ದೇಶದ ನಾಗರಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಅವಿಭಾಜ್ಯ ಅಂಗವಾಗಿದೆ.

ನ.7ರಂದು ದೆಹಲಿಯಲ್ಲಿ ‘ವಂದೇ ಮಾತರಂ’ ಗೀತೆಯ 150ನೇ ವರ್ಷದ ಸ್ಮರಣಾರ್ಥ ವಿಶೇಷ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅವರು, ವಂದೇ ಮಾತರಂ ಕೇವಲ ಒಂದು ಪದವಲ್ಲ, ಅದು ಒಂದು ಮಂತ್ರ, ಒಂದು ಶಕ್ತಿ, ಒಂದು ಕನಸು ಮತ್ತು ಒಂದು ಗಂಭೀರ ಸಂಕಲ್ಪ ಎಂದು ಹೇಳಿದ್ದರು. ವಂದೇ ಮಾತರಂ ಮಾತೆ ಭಾರತಿಗೆ ಭಕ್ತಿ ಮತ್ತು ಆಧ್ಯಾತ್ಮಿಕ ಸಮರ್ಪಣೆಯನ್ನು ಸಾಕಾರಗೊಳಿಸುತ್ತದೆ ಎಂದು ತಿಳಿಸಿದ್ದರು.

error: Content is protected !!