ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ, ಭದ್ರತಾ ಪಡೆಗಳಿಗೆ ಸವಾಲಾಗಿದ್ದ ನಕ್ಸಲ್ ಚಳವಳಿಯ ಪ್ರಮುಖ ಮುಖವೊಂದು ಅಂತಿಮವಾಗಿ ಶಸ್ತ್ರ ತ್ಯಜಿಸಿದೆ. ಕುಖ್ಯಾತ ನಕ್ಸಲ್ ಕಮಾಂಡರ್ ಹಾಗೂ ಕೇಂದ್ರ ಸಮಿತಿ ಸದಸ್ಯ ರಾಮಧೇರ್ ಮಜ್ಜಿ ಪೊಲೀಸರ ಮುಂದೆ ಶರಣಾಗಿದ್ದು, ದೇಶದ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಮಹತ್ವದ ತಿರುವು ಸಿಕ್ಕಿದೆ.
ಇತ್ತೀಚೆಗೆ ಎನ್‌ಕೌಂಟರ್‌ನಲ್ಲಿ ಹತನಾದ ಹಿದ್ಮಾಗೆ ಸಮಾನ ಹುದ್ದೆಯ ನಾಯಕನೆಂದು ಪರಿಗಣಿಸಲ್ಪಟ್ಟ ಮಜ್ಜಿ ತಲೆಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈ ಬೆಳವಣಿಗೆಯೊಂದಿಗೆ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವ್ಯಾಪ್ತಿಯ ನಕ್ಸಲ್ ಜಾಲಕ್ಕೆ ಭಾರೀ ಹೊಡೆತ ಬಿದ್ದಿದೆ ಎನ್ನಲಾಗಿದೆ.
ಛತ್ತೀಸ್‌ಗಢದ ಬಕರ್ ಕಟ್ಟಾ ಪೊಲೀಸ್ ಠಾಣೆಯಲ್ಲಿ ಮಜ್ಜಿ ಶರಣಾಗಿದ್ದು, ಈ ಸಂದರ್ಭದಲ್ಲಿ ಚಂದು ಉಸೆಂಡಿ, ಲಲಿತಾ, ಜಾನಕಿ, ಪ್ರೇಮ್, ರಾಮಸಿಂಗ್ ದಾದಾ, ಸುಕೇಶ್ ಪೊಟ್ಟಮ್, ಲಕ್ಷ್ಮಿ, ಶೀಲಾ, ಸಾಗರ್, ಕವಿತಾ ಮತ್ತು ಯೋಗಿತಾ ಸೇರಿದಂತೆ ಇನ್ನಿತರ ನಕ್ಸಲರೂ ಶಸ್ತ್ರಾಸ್ತ್ರಗಳೊಂದಿಗೆ ಶರಣಾದರು.
ಇದಕ್ಕೂ ಮೊದಲು ಬಾಲಘಾಟ್‌ನಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸಮ್ಮುಖದಲ್ಲಿ ಹತ್ತು ನಕ್ಸಲರು ಶರಣಾಗಿ, ಸಂವಿಧಾನದ ಪ್ರತಿಯನ್ನು ಸ್ವೀಕರಿಸಿ ಮುಖ್ಯವಾಹಿನಿಗೆ ಮರಳಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಛತ್ತೀಸ್‌ಗಢ ಉಪಮುಖ್ಯಮಂತ್ರಿ ಅರುಣ್ ಸಾವೊ, ರಾಜ್ಯದಲ್ಲಿ ನಕ್ಸಲಿಸಂ ಶೇ.80ರಷ್ಟು ನಿಯಂತ್ರಣಕ್ಕೆ ಬಂದಿದೆ ಎಂದಿದ್ದಾರೆ

