Monday, December 8, 2025

ಖದೀಮರ ಕೈಚಳಕ ನೋಡಿ! BMTC ಬಸ್‌ಗೆ ಕನ್ನ: ಕೆಲವೇ ನಿಮಿಷದಲ್ಲಿ 120 ಲೀಟರ್‌ ಡೀಸೆಲ್ ಮಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಾಢ ನಿದ್ರೆಯಲ್ಲಿದ್ದ ಚಾಲಕ ಮತ್ತು ನಿರ್ವಾಹಕರಿಗೂ ಗೊತ್ತಾಗದಂತೆ, ಬಿಎಂಟಿಸಿ ಬಸ್‌ನಿಂದ ನೂರಾರು ಲೀಟರ್ ಡೀಸೆಲ್ ಕದ್ದುಕೊಂಡು ಹೋಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ರಾಂಪುರ ಗ್ರಾಮದ ಪೆಟ್ರೋಲ್ ಬಂಕ್ ಆವರಣದಲ್ಲಿ ನಿಂತಿದ್ದ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಸ್‌ನಿಂದ ಅಪರಿಚಿತರು 120 ಲೀಟರ್‌ಗಿಂತ ಹೆಚ್ಚು ಡೀಸೆಲ್ ಎಗರಿಸಿ ಪರಾರಿಯಾದ ಘಟನೆ ಸಿಸಿಟಿವಿ ದೃಶ್ಯಗಳ ಮೂಲಕ ಬಯಲಾಗಿದೆ.

ಮಂಡೂರು 47ನೇ ಡಿಪೋದ ಬಸ್ ಡಿಸೆಂಬರ್ 1ರ ರಾತ್ರಿ ರಾಂಪುರ–ಕೆಆರ್ ಮಾರುಕಟ್ಟೆ ಮಾರ್ಗದ ಕೊನೆಯ ಟ್ರಿಪ್ ಮುಗಿಸಿ ಬಂಕ್ ಆವರಣದಲ್ಲಿ ನಿಲ್ಲಿಸಲಾಗಿತ್ತು. ಚಾಲಕ ಶಿವಪ್ಪ ಎಂಎಸ್ ಮತ್ತು ನಿರ್ವಾಹಕ ಮಂಜುನಾಥ್ ಬಿಸಿ ಬಸ್ ಒಳಗೇ ನಿದ್ರೆಗೆ ಜಾರಿದ್ದರು. ಡಿಸೆಂಬರ್ 2ರ ಬೆಳಗಿನ ಜಾವ 2.30ರ ಸುಮಾರಿಗೆ ಕಾರಿನಲ್ಲಿ ಬಂದ ಇಬ್ಬರು ಸ್ಥಳವನ್ನು ಪರಿಶೀಲಿಸಿ, ಸಿಬ್ಬಂದಿ ಮತ್ತು ಬಸ್ ಸಿಬ್ಬಂದಿ ನಿದ್ರಿಸುತ್ತಿರುವುದು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಕೇವಲ 13 ನಿಮಿಷಗಳಲ್ಲಿ ಡೀಸೆಲ್ ಟ್ಯಾಂಕ್‌ನ ಬೀಗ ಮುರಿದು, ಪೈಪ್ ಮೂಲಕ ಇಂಧನವನ್ನು ಪ್ಲಾಸ್ಟಿಕ್ ಕ್ಯಾನ್‌ಗಳಿಗೆ ತುಂಬಿಸಿಕೊಂಡಿದ್ದಾರೆ.

ಸುಮಾರು 124 ಲೀಟರ್ ಡೀಸೆಲ್ ಕದಿಯಲ್ಪಟ್ಟಿದ್ದು, ಇದರ ಅಂದಾಜು ಮೌಲ್ಯ 11 ಸಾವಿರ ರೂಪಾಯಿ ಎಂದು ತಿಳಿದುಬಂದಿದೆ. ಬೆಳಗ್ಗೆ ಟ್ರಿಪ್ ವೇಳೆ ಬಸ್ ಸ್ಥಗಿತಗೊಂಡಾಗ ಅನುಮಾನಗೊಂಡ ಸಿಬ್ಬಂದಿ ಸಿಸಿಟಿವಿ ಪರಿಶೀಲನೆ ನಡೆಸಿ ಆವಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

error: Content is protected !!