Wednesday, December 10, 2025

ರೆಡ್-ಬಾಲ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಸೀಸ್ ಸ್ಟಾರ್ ಆಟಗಾರ ಮಿಚೆಲ್ ಮಾರ್ಷ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆಲ್‌ರೌಂಡರ್ ಮಿಚೆಲ್ ಮಾರ್ಷ್ ರಾಜ್ಯ ಮಟ್ಟದ ರೆಡ್-ಬಾಲ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

ಇನ್ನು ಮುಂದೆ ಶೆಫೀಲ್ಡ್ ಶೀಲ್ಡ್ ಟೂರ್ನಮೆಂಟ್‌ನಲ್ಲಿ ಪಶ್ಚಿಮ ಆಸ್ಟ್ರೇಲಿಯಾ ಪರ ಆಡುವುದಿಲ್ಲ. ಈ ನಿರ್ಧಾರವು ಮಾರ್ಷ್ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಇತ್ತೀಚಿನ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮಾರ್ಷ್, ತಮ್ಮ ತಂಡದ ಆಟಗಾರರಿಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

2009 ರಲ್ಲಿ ಪಶ್ಚಿಮ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಿದ ಮಾರ್ಷ್, ಈಗ ರೆಡ್-ಬಾಲ್ ಕ್ರಿಕೆಟ್‌ನಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಆದರೆ ರಾಷ್ಟ್ರೀಯ ತಂಡಕ್ಕಾಗಿ ಟೆಸ್ಟ್ ಪಂದ್ಯಗಳನ್ನು ಆಡುವ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆಯ್ಕೆದಾರರು ಕರೆದರೆ ಆಶಸ್ ಸರಣಿಯಲ್ಲಿ ಭಾಗವಹಿಸಲು ಸಿದ್ಧನಿದ್ದೇನೆ ಎಂದು ಮಾರ್ಷ್ ಸ್ಪಷ್ಟಪಡಿಸಿದ್ದಾರೆ. ಆದರೆ ಶೀಲ್ಡ್ ಪಂದ್ಯಗಳಿಂದ ದೂರ ಸರಿದಿರುವ ಮಾರ್ಷ್​ಗೆ ಆಶಸ್ ಸರಣಿಯಲ್ಲಿ ಆಡುವ ಅವಕಾಶ ಸಿಗುವುದು ಅನುಮಾನವಾಗಿದೆ. ಇದಕ್ಕೂ ಮೊದಲು, ಆಸ್ಟ್ರೇಲಿಯಾದ ಮುಖ್ಯ ಆಯ್ಕೆದಾರ ಜಾರ್ಜ್ ಬೈಲಿ ನವೆಂಬರ್‌ನಲ್ಲಿ ಮಾರ್ಷ್ ಅವರ ಪ್ರದರ್ಶನವು ಆಶಸ್‌ಗೆ ಹೊಸ ಶಕ್ತಿಯನ್ನು ತರಬಹುದು ಎಂದು ಹೇಳಿದ್ದರು. ಸರಣಿಯ ಆರಂಭದಲ್ಲಿ ಮಾರ್ಷ್​ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಆದರೆ ಪರಿಸ್ಥಿತಿಯನ್ನು ಅವಲಂಬಿಸಿ ನಂತರ ಬದಲಾವಣೆಗಳನ್ನು ಮಾಡಲಿದ್ದೇವೆ ಎಂದಿದ್ದರು.

error: Content is protected !!