ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನಟಿ20 ಸರಣಿಯ ಮೊದಲ ಪಂದ್ಯಕ್ಕೆ ಕಟಕ್‌ನ ಬಾರಾಬತಿ ಕ್ರೀಡಾಂಗಣ ಸಜ್ಜಾಗಿದ್ದು ಈ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್ ಆಡುವ ಹನ್ನೊಂದರ ಬಳಗದ ಬಗ್ಗೆ ಪ್ರಮುಖ ಸುಳಿವು ನೀಡಿದ್ದಾರೆ.
ಇನ್ನು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಬಗ್ಗೆಯೂ ಮಾತನಾಡಿರುವ ಸೂರ್ಯಕುಮಾರ್ ಯಾದವ್, ತಂಡದ ಆಡುವ ಹನ್ನೊಂದರಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವುದಿಲ್ಲ ಎಂದು ಸುಳಿವು ನೀಡಿದ್ದಾರೆ.
ವಾಸ್ತವವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್ ಮೊದಲ ಎರಡು ಟಿ20 ಪಂದ್ಯಗಳನ್ನು ಆಡಿದ್ದರು. ನಂತರ ಮುಂದಿನ ಮೂರು ಪಂದ್ಯಗಳಿಂದ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಅವರ ಸ್ಥಾನದಲ್ಲಿ ಜಿತೇಶ್ ಶರ್ಮಾ ಅವರಿಗೆ ಆಡುವ ಅವಕಾಶ ನೀಡಲಾಯಿತು. ಹೀಗಾಗಿ ಸೂರ್ಯ ಹೇಳಿರುವ ಪ್ರಕಾರ ಸಂಜು ಸ್ಯಾಮ್ಸನ್‌ಗೆ ಮೊದಲ ಟಿ20 ಪಂದ್ಯದಲ್ಲಿ ಅವಕಾಶ ಸಿಗುವುದು ಅನುಮಾನ.
ತಂಡದ ಪ್ಲೇಯಿಂಗ್ 11 ಬಗ್ಗೆ ಮಾತನಾಡಿರುವ ಸೂರ್ಯ, ‘ನಾವು ಆಡುವ XI ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡದಿರಲು ನಿರ್ಧರಿಸಿದ್ದೇವೆ. ವಿಶೇಷವಾಗಿ ಮುಂದಿನ ಎರಡು ಸರಣಿಗಳಲ್ಲಿ, ನಾವು ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ. ನಾವು ಅದನ್ನು ಮುಂದುವರಿಸಲು ಬಯಸುತ್ತೇವೆ’ ಎಂದಿದ್ದಾರೆ.
ಸಂಜು ಸ್ಯಾಮ್ಸನ್ ಬಗ್ಗೆ ಹೇಳುವುದಾದರೆ, ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿರುವ ಅವರು ದೇಶೀಯ ಟಿ20 ಟೂರ್ನಮೆಂಟ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ 58.25 ಸರಾಸರಿಯಲ್ಲಿ 233 ರನ್ ಗಳಿಸಿದ್ದಾರೆ. ಇದರಲ್ಲಿ 11 ಸಿಕ್ಸರ್‌ಗಳು ಮತ್ತು 21 ಬೌಂಡರಿಗಳು ಸೇರಿವೆ. ಅವರ ಅದ್ಭುತ ಫಾರ್ಮ್ ಹೊರತಾಗಿಯೂ ಸ್ಯಾಮ್ಸನ್‌ಗೆ ಅವಕಾಶ ನೀಡದಿದ್ದರೆ ಅದು ನಿಜಕ್ಕೂ ಅನ್ಯಾಯವಾಗುತ್ತದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅವರು ಎಷ್ಟು ಪಂದ್ಯಗಳನ್ನು ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್.

