Wednesday, December 10, 2025

ಸುತ್ತೂರು ಜಯಂತೋತ್ಸವಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಭೇಟಿ: ಬಿಗಿ ಭದ್ರತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯದ ಮಳವಳ್ಳಿ ಪಟ್ಟಣವು ಡಿಸೆಂಬರ್ 17ರಂದು ನಡೆಯಲಿರುವ ಸುತ್ತೂರಿನ ಶಿವರಾತ್ರಿ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವಕ್ಕೆ ಸಜ್ಜಾಗುತ್ತಿದೆ. ದೇಶದ ಅತ್ಯುನ್ನತ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ, ಆಡಳಿತ ಮತ್ತು ಪೊಲೀಸ್ ಇಲಾಖೆ ಪೂರ್ವಸಿದ್ಧತೆಗಳನ್ನು ತೀವ್ರಗೊಳಿಸಿದೆ.

ರಾಷ್ಟ್ರಪತಿ ದ್ರೌಪತಿ ಮುರ್ಮು ಆಗಮನವನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮ ನಡೆಯಲಿರುವ ಪ್ರದೇಶಗಳಲ್ಲಿ ಭದ್ರತೆ ಹಾಗೂ ಮೂಲಸೌಲಭ್ಯಗಳ ಸಮಗ್ರ ಪರಿಶೀಲನೆ ನಡೆಸಲಾಗಿದೆ.

ಪಟ್ಟಣದ ಹೊರವಲಯದ ಮಾರೇಹಳ್ಳಿ ಬಳಿ ನಿರ್ಮಿಸಲಾಗುತ್ತಿರುವ ಹೆಲಿಪ್ಯಾಡ್‌ಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು. ಗ್ರೀನ್ ರೂಂ ವ್ಯವಸ್ಥೆ, ವಿದ್ಯುತ್ ಕಂಬಗಳ ಸ್ಥಳಾಂತರ, ಜಾಗ ಸಮತಟ್ಟುಗೊಳಿಸುವ ಕಾರ್ಯ, ರಾಷ್ಟ್ರಪತಿಗಳ ಸಂಚಾರ ಮಾರ್ಗ ಮತ್ತು ಅಗತ್ಯ ಮೂಲಸೌಕರ್ಯಗಳ ಅಳವಡಿಕೆ ಕುರಿತು ಸ್ಥಳದಲ್ಲೇ ಚರ್ಚೆ ನಡೆಯಿತು.

ಪ್ರವಾಸಿ ಮಂದಿರ ಹಾಗೂ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವ್ಯವಸ್ಥೆಗಳ ಸ್ಥಿತಿಗತಿ ಪರಿಶೀಲಿಸಿದರು. ಜಯಂತೋತ್ಸವದ ಅವಧಿಯಲ್ಲಿ ದಿನದ 24 ಗಂಟೆಗಳಲ್ಲಿಯೂ ವೈದ್ಯಕೀಯ ಸಿಬ್ಬಂದಿ ಲಭ್ಯವಾಗುವಂತೆ ಹಾಗೂ ತುರ್ತು ಚಿಕಿತ್ಸೆಗೆ ಪೂರ್ಣ ಸನ್ನದ್ಧತೆ ಇರಬೇಕು ಎಂದು ಸೂಚನೆ ನೀಡಲಾಯಿತು.

ಡಿ.17ರಿಂದ 22ರವರೆಗೆ ನಡೆಯಲಿರುವ ಮಹೋತ್ಸವಕ್ಕೆ ರಾಷ್ಟ್ರಪತಿ, ಮುಖ್ಯಮಂತ್ರಿ ಹಾಗೂ ರಾಜ್ಯ ಸಚಿವರು ಆಗಮಿಸಲಿರುವ ಕಾರಣ, ಸಾರ್ವಜನಿಕ ವಾಹನ ಪಾರ್ಕಿಂಗ್, ಗಣ್ಯರ ವಾಸ್ತವ್ಯಕ್ಕೆ ಲಾಡ್ಜ್‌, ಕಲ್ಯಾಣ ಮಂಟಪ ಹಾಗೂ ರೆಸಾರ್ಟ್‌ಗಳ ವ್ಯವಸ್ಥೆ ಕುರಿತು ವಿಶೇಷ ಗಮನ ಹರಿಸಲಾಗಿದೆ.

error: Content is protected !!