Wednesday, December 10, 2025

ಋತುಚಕ್ರದ ರಜೆಗೆ ತಾತ್ಕಾಲಿಕ ಬ್ರೇಕ್‌: ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನ ಋತುಚಕ್ರ ರಜೆ ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಸರ್ಕಾರದ ಆದೇಶದ ವಿರುದ್ಧ ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದ ಸಂಘಟನೆಗಳು ಕಾನೂನು ಹೋರಾಟಕ್ಕೆ ಇಳಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಆದೇಶದ ಕುರಿತು ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸಮಯ ನೀಡಿದ್ದು, ಚಳಿಗಾಲದ ನ್ಯಾಯಮಂಡಳಿಯ ರಜೆ ನಂತರ ಉತ್ತರ ನೀಡುವಂತೆ ಸೂಚಿಸಿದೆ. ಅಂತಿಮ ತೀರ್ಪು ಹೊರಬರುವವರೆಗೆ ಸರ್ಕಾರದ ಆದೇಶದ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಿರುವುದಾಗಿ ನ್ಯಾಯಾಲಯ ತಿಳಿಸಿದೆ.

2025ರ ನವೆಂಬರ್ 20ರಂದು ರಾಜ್ಯ ಸರ್ಕಾರ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸಂಸ್ಥೆಗಳ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ಋತುಚಕ್ರ ರಜೆ ಕಡ್ಡಾಯವೆಂದು ಘೋಷಿಸಿತ್ತು. ಈ ಆದೇಶದಲ್ಲಿ ಕೆಲವು ಷರತ್ತುಗಳನ್ನೂ ವಿಧಿಸಿ, ಎಲ್ಲ ಸಂಸ್ಥೆಗಳಿಗೂ ಏಕಸಮಾನವಾಗಿ ಜಾರಿಗೆ ತರಲು ಸೂಚಿಸಲಾಗಿತ್ತು.

ಈ ಮಧ್ಯಂತರ ತಡೆಯೊಂದಿಗೆ ಋತುಚಕ್ರ ರಜೆ ಕುರಿತ ಚರ್ಚೆ ಮತ್ತಷ್ಟು ಗಂಭೀರವಾಗಿದ್ದು, ಸರ್ಕಾರ ನೀಡುವ ಆಕ್ಷೇಪಣೆ ಮತ್ತು ಮುಂದಿನ ವಿಚಾರಣೆಗಳ ಮೇಲೆ ಅಂತಿಮ ತೀರ್ಮಾನ ಅವಲಂಬಿತವಾಗಲಿದೆ.

error: Content is protected !!