ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಿದ ಕಾಂಗ್ರೆಸ್ ಇಂದು ವಿಶೇಷ ಸಮಗ್ರ ಪರಿಷ್ಕರಣೆ (SIR) ಮಾತನಾಡುತ್ತಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಿಡಿಕಾರಿದರು.
ಲೋಕಸಭೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತಂತೆ ನಿಶಿಕಾಂತ್ ದುಬೆ ಮಾತನಾಡಿ, ಕಾಂಗ್ರೆಸ್ ಯಾವ ರೀತಿ ವ್ಯವಸ್ಥೆಯನ್ನು ಈ ಹಿಂದೆ ಬದಲಾಯಿಸಿತ್ತು ಎಂದು ದಾಖಲೆಯನ್ನು ಮುಂದಿಟ್ಟರು.
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಇಂದಿರಾ ಗಾಂಧಿ ಮತಕಳ್ಳತನ ಮಾಡಿ ಚುನಾವಣೆಯಲ್ಲಿ ಜಯಗಳಿಸಿದರು. ತನ್ನ ವಿರುದ್ಧ ಕೋರ್ಟ್ ತೀರ್ಪು ಬಂದಾಗ ಮೂವರು ನ್ಯಾಯಾಧೀಶರನ್ನು ಬೈಪಾಸ್ ಮಾಡಿ ಒಬ್ಬರನ್ನೇ 8.5 ವರ್ಷಗಳ ಕಾಲ ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡಿದ್ದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನದ 42ನೇ ತಿದ್ದುಪಡಿಗೆ ಕಾರಣವಾದ 1976 ರ ಸ್ವರಣ್ ಸಿಂಗ್ ಸಮಿತಿಯನ್ನು ಉಲ್ಲೇಖಿಸಿದ ದುಬೆ, ಸ್ವರಣ್ ಸಿಂಗ್ ಸಮಿತಿಯನ್ನು 1976 ರಲ್ಲಿ ರಚಿಸಿ ರಾಷ್ಟ್ರಪತಿ ಅವರ ಇದ್ದ ಅಧಿಕಾರವನ್ನು ಕಿತ್ತುಕೊಂಡಿರಿ. ರಾಷ್ಟ್ರಪತಿಗಳು ರಬ್ಬರ್ ಸ್ಟ್ಯಾಂಪ್ ಆದರು. 42ನೇ ತಿದ್ದುಪಡಿ ಮಾಡುವ ಮೂಲಕ ಸಂವಿಧಾನದ ಎಲ್ಲಾ ಸಂಸ್ಥೆಗಳನ್ನು ಕೊನೆಗೊಳಿಸಿದ್ದು ಕಾಂಗ್ರೆಸ್ ಎಂದು ಕಿಡಿಕಾರಿದರು.
ಬಿಜೆಪಿ ಚುನಾವಣಾ ಆಯೋಗವನ್ನು ವಶಪಡಿಸಿಕೊಂಡಿದೆ ಎಂದು ರಾಹುಲ್ ಆರೋಪಕ್ಕೆ ನಿಶಿಕಾಂತ್ ದುಬೆ,ಕಾಂಗ್ರೆಸ್ ಈಗ ಚುನಾವಣಾ ಆಯೋಗದ ಬಗ್ಗೆ ಮಾತನಾಡುತ್ತಿದೆ. ದೇಶದ ಮೊದಲ ಚುನಾವಣಾ ಆಯುಕ್ತ ಸುಕುಮಾರ್ ಸೇನ್ ನಿವೃತ್ತರಾದಾಗ ಬಳಿಕ ಅವರನ್ನು ಸುಡಾನ್‌ನ ರಾಯಭಾರಿಯಾಗಿ ನೇಮಿಸಲಾಗುತ್ತದೆ. ನಿವೃತ್ತಿಯ ನಂತರ ವಿ.ಎಸ್. ರಮಾದೇವಿ ಹಿಮಾಚಲ ಪ್ರದೇಶದ ರಾಜ್ಯಪಾಲರಾಗುತ್ತಾರೆ. ಟಿ.ಎನ್. ಶೇಷನ್ ಅವರು ನಿವೃತ್ತಿಯ ನಂತರ ಗುಜರಾತ್‌ನಲ್ಲಿ ಬಿಜೆಪಿ ವಿರುದ್ಧ ಕಣಕ್ಕೆ ಇಳಿಯುತ್ತಾರೆ. ಎಂ.ಎಸ್. ಗಿಲ್ ನಿವೃತ್ತರಾದ ನಂತರ 10 ವರ್ಷಗಳಿಗೂ ಹೆಚ್ಚು ಕಾಲ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. ನೀವು ಯಾವ ಚುನಾವಣಾ ಆಯೋಗದ ಬಗ್ಗೆ ಮಾತನಾಡುತ್ತಿದ್ದೀರಿ? ನೀವು ಯಾವ ನ್ಯಾಯದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ನೀವು ಸಿಬಿಐ ವಿರುದ್ಧ ಈಗ ಮಾತನಾಡುತ್ತಿದ್ದೀರಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಭದ್ರತಾ ಅಧಿಕಾರಿಯಾಗಿದ್ದ ಅಶ್ವನಿ ಕುಮಾರ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ಮಾಡಲಾಯಿತು. ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಅವರೊಂದಿಗೆ ಪ್ರತಿದಿನ ಭೇಟಿಯಾಗುತ್ತಿದ್ದ ಮತ್ತು ಕಾಂಗ್ರೆಸ್ ನಾಯಕರು ಯಾವಾಗ ಮತ್ತು ಎಲ್ಲಿಗೆ ಹೋದರು ಎಂಬ ವಿವರಗಳನ್ನು ಒಳಗೊಂಡ ಡೈರಿಯನ್ನು ಹಸ್ತಾಂತರ ಮಾಡುತ್ತಿದ್ದ ರಂಜಿತ್ ಸಿನ್ಹಾ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು ಎಂದು ದೂರಿದರು.

