ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಮಲಕನಗಿರಿ ಜಿಲ್ಲೆಯಲ್ಲಿ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿದೆ. ಇದರಿಂದಾಗಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಈ ಪ್ರದೇಶದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ವೈಜ್ಞಾನಿಕ ತಂಡ, ಸ್ನಿಫರ್-ಡಾಗ್ ಸ್ಕ್ವಾಡ್ ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯ ಪಡೆ (ODRAF) ಸ್ಥಳಕ್ಕೆ ಆಗಮಿಸಿದ್ದು, ನಾಪತ್ತೆಯಾಗಿರುವ ರುಂಡವನ್ನು ಪತ್ತೆಹಚ್ಚಲು ವ್ಯಾಪಕ ಶೋಧ ನಡೆಸುತ್ತಿದೆ.
ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯ ಎರಡು ಹಳ್ಳಿಗಳ ನಿವಾಸಿಗಳ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾದ ಬುಡಕಟ್ಟು ಮಹಿಳೆಯೊಬ್ಬರ ಕ್ರೂರ ಹತ್ಯೆ ಮತ್ತು ಆಕೆಯ ತಲೆ ಇಲ್ಲದ ಶವ ಪತ್ತೆಯಾಗಿದ್ದು, ಅಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿ, ತಾತ್ಕಾಲಿಕವಾಗಿ ಇಂಟರ್ನೆಟ್ ಸ್ಥಗಿತಗೊಳಿಸಿದ್ದಾರೆ.
ಪರಿಸ್ಥಿತಿ ಈಗ ಶಾಂತಿಯುತವಾಗಿದೆ. ಎರಡೂ ಗ್ರಾಮಗಳ ಸಮುದಾಯಗಳ ನಡುವೆ ಒಪ್ಪಂದಕ್ಕೆ ಬರಲಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, 163 ಮನೆಗಳಿಗೆ ಹಾನಿಯಾಗಿದೆ. ಮೃತ ಮಹಿಳೆಯ ಮಗನಿಗೆ 30,000 ರೂ.ಗಳ ಪರಿಹಾರ ನೀಡಲಾಗಿದೆ. ಮುಖ್ಯಮಂತ್ರಿ 4 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆ ಇಲ್ಲದ ಶವ ಪತ್ತೆಯಾಗಿರುವ ಬುಡಕಟ್ಟು ಮಹಿಳೆಯ ಹತ್ಯೆಯ ಆರೋಪದ ಮೇಲೆ ನಡೆದ ಗುಂಪು ಘರ್ಷಣೆಯ ನಂತರ 2 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಸುಮಾರು 4 ಮನೆಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ನಡೆಸಲಾಗಿದೆ.
ರಾಖೇಲ್‌ಗುಡ ಗ್ರಾಮದ ವಿಧವೆ ಲೇಕ್ ಪಡಿಯಾಮಿ ಎಂಬ 51 ವರ್ಷದ ಮಹಿಳೆಯ ತಲೆ ಇಲ್ಲದ ಶವ ಪತ್ತೆಯಾದ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ. ನದಿಯಲ್ಲಿ ಆಕೆಯ ಶವ ಪತ್ತೆಯಾಗಿದ್ದು, ಸ್ಥಳೀಯ ಬುಡಕಟ್ಟು ಸಮುದಾಯಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ರಾಖೇಲ್‌ಗುಡ ಗ್ರಾಮದ ನೂರಾರು ಬುಡಕಟ್ಟು ಪುರುಷರು ಮತ್ತು ಮಹಿಳೆಯರು ಶಸ್ತ್ರಾಸ್ತ್ರಗಳನ್ನು ಹಿಡಿದು MV-26 ಗ್ರಾಮದಲ್ಲಿ ಜಮಾಯಿಸಿ ಮನೆಗಳ ಮೇಲೆ ದಾಳಿ ನಡೆಸಿದರು.

