ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದೊಂದು ವಾರದಿಂದ ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಸಮಸ್ಯೆಯುಂಟಾಗಿದೆ. ಪರಿಣಾಮ ಬಿಎಂಟಿಸಿ ನಿಗಮಕ್ಕೂ ಬಿಸಿ ತಟ್ಟಿದ್ದು, ಒಂದೇ ವಾರದಲ್ಲಿ 50 ಲಕ್ಷ ರೂ. ನಷ್ಟ ಉಂಟಾಗಿದೆ.
ಕಳೆದ ಒಂದು ವಾರದಿಂದ ಇಂಡಿಗೋ ವಿಮಾನಗಳ ಸಮಸ್ಯೆಯಿಂದಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಏರ್‌ಪೋರ್ಟ್ ಬಸ್ ನಿಲುಗಡೆ ಪ್ರಯಾಣಿಕರಿಲ್ಲದೇ ಬಣಗುಡುತ್ತಿದೆ ಹಾಗೂ ವೋಲ್ವೋ ಬಸ್‌ಗಳು ಕೂಡ ಪ್ರಯಾಣಿಕರಿಲ್ಲದೇ ಖಾಲಿ ನಿಂತಿವೆ. ಒಂದು ವೋಲ್ವೋ ಬಸ್‌ನಲ್ಲಿ 35 ಸೀಟ್ ಭರ್ತಿಯಾಗೋದು ಕಷ್ಟವಾಗಿದೆ.
ಇನ್ನು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಬಸ್‌ಗಳ ಸಂಖ್ಯೆ ಕಡಿಮೆ ಮಾಡಿಲ್ಲ. ಆದರೆ ಪ್ರತಿದಿನ ಬಿಎಂಟಿಸಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಒಂದು ವಾರಕ್ಕೆ ಸುಮಾರು 50 ಲಕ್ಷ ರೂ. ನಷ್ಟ ಉಂಟಾಗಿದೆ. ಡಿ.1ರಿಂದ ಇಂಡಿಗೋ ಫ್ಲೈಟ್ ಸಮಸ್ಯೆ ಆರಂಭವಾಗಿದ್ದು, ದಿನೇ ದಿನೇ ಏರ್‌ಪೋರ್ಟ್ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತಿದೆ.
ಈ ಹಿಂದೆ ಪ್ರತಿದಿನ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ 156 ಬಸ್‌ಗಳು ಸಂಚಾರ ಮಾಡುತ್ತಿದ್ದವು. ಈ ಬಸ್‌ಗಳಿಂದ 1,150 ಟ್ರಿಪ್‌ಗಳನ್ನು ಮಾಡಲಾಗುತ್ತಿತ್ತು. 10 ಸಾವಿರ ಪ್ರಯಾಣಿಕರು ಸಂಚಾರ ಮಾಡುತ್ತಿದ್ದರು. ಆದರೆ ಇಂಡಿಗೋ ಫ್ಲೈಟ್ ಸಮಸ್ಯೆಯಿಂದ ಪ್ರತಿದಿನದ ಪ್ರಯಾಣಿಕರ ಸಂಖ್ಯೆಯಲ್ಲಿ 3 ರಿಂದ 4 ಸಾವಿರ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ.

