ಇತ್ತೀಚಿನ ದಿನಗಳಲ್ಲಿ ದಿನಬಳಕೆ ವಸ್ತುಗಳ ಗುಣಮಟ್ಟದ ಕುರಿತು ಗ್ರಾಹಕರಲ್ಲೇ ಆತಂಕ ಹೆಚ್ಚುತ್ತಿದೆ. ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾಮಾನ್ಯವಾಗಿ ಪ್ರತಿದಿನ ಬಳಸುವ ಗೋಧಿಹಿಟ್ಟಿನ ಶುದ್ಧತೆ ಕುರಿತು ಪ್ರಶ್ನೆಗಳು ಉದ್ಭವಿಸುತ್ತಿವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಗೋಧಿಹಿಟ್ಟಿನಲ್ಲಿ ಕೆಲವೆಡೆ ಸೀಮೆಸುಣ್ಣದ ಪುಡಿ, ಬೋರಿಕ್ ಪೌಡರ್ ಅಥವಾ ಮೈದಾ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಗ್ರಾಹಕರು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಆಹಾರ ತಜ್ಞರು ಎಚ್ಚರಿಸುತ್ತಾರೆ.
ಕಣ್ಣಿಗೆ ಒಮ್ಮೆ ನೋಡಿದರೆ ಅಸಲಿ ಮತ್ತು ನಕಲಿ ಹಿಟ್ಟು ವ್ಯತ್ಯಾಸ ಹೇಳೋದು ಕಷ್ಟವಾಗಿದ್ದರೂ, ಮನೆಯಲ್ಲೇ ಸರಳವಾಗಿ ಪರೀಕ್ಷಿಸಬಹುದಾದ ಕೆಲವು ವಿಧಾನಗಳು ಸಾಧ್ಯವೆಂದು ಹೇಳಲಾಗುತ್ತಿದೆ.
- ನೀರಿನಲ್ಲಿ ಸ್ವಲ್ಪ ಗೋಧಿಹಿಟ್ಟು ಸೇರಿಸಿದಾಗ ಅದು ಮೇಲ್ಮೈಯಲ್ಲಿ ತೇಲಿದರೆ ಕಲಬೆರಕೆ ಇರುವ ಸಾಧ್ಯತೆ ಹೆಚ್ಚಿದೆ. ಹಿಟ್ಟು ನೀರಿನಲ್ಲಿ ಮುಳುಗಿದರೆ ಅದು ಶುದ್ಧವಾಗಿರುವ ಸೂಚನೆ.
- ಹಿಟ್ಟು ನಾದುವಾಗ ಸಹ ಅದರ ಗುಣಮಟ್ಟ ತಿಳಿಯಬಹುದು. ಶುದ್ಧ ಗೋಧಿಹಿಟ್ಟು ಬೇಗ ನಾದಿಕೊಂಡು ಮೃದುವಾಗುತ್ತದೆ. ಆದರೆ ಕಲಬೆರಕೆಯ ಹಿಟ್ಟಿಗೆ ಹೆಚ್ಚಿನ ನೀರು ಬೇಕಾಗುವುದರ ಜೊತೆಗೆ ನಾದುವಾಗ ಕಠಿಣತೆ ಕಂಡುಬರುತ್ತದೆ.
- ಇನ್ನೊಂದು ವಿಧಾನವಾಗಿ, ನಿಂಬೆಹಣ್ಣು ರಸ ಬಳಸಿ ಕೂಡ ಶುದ್ಧತೆ ಪರೀಕ್ಷಿಸಬಹುದು. ಹಿಟ್ಟಿಗೆ ನಿಂಬೆ ರಸ ಹಾಕಿದಾಗ ಗುಳ್ಳೆಗಳು ಬಂದರೆ ಅದರಲ್ಲಿ ರಾಸಾಯನಿಕ ಮಿಶ್ರಣವಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

