ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಕ್ತರ ನಂಬಿಕೆಯ ಕೇಂದ್ರವೆನಿಸಿರುವ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಮತ್ತೊಂದು ಗಂಭೀರ ಅಕ್ರಮ ಬೆಳಕಿಗೆ ಬಂದಿದೆ. ಲಡ್ಡು ವಿವಾದದ ಬೆನ್ನಲ್ಲೇ, ಕಳೆದ ಹತ್ತು ವರ್ಷಗಳಿಂದ ದೇವಾಲಯ ಟ್ರಸ್ಟ್‌ಗೆ ರೇಷ್ಮೆ ಎಂಬ ಹೆಸರಿನಲ್ಲಿ ಕೃತಕ ಪಾಲಿಯೆಸ್ಟರ್ ದುಪಟ್ಟಾಗಳನ್ನು ಪೂರೈಸಲಾಗುತ್ತಿತ್ತು ಎಂಬ ಸಂಗತಿ ಟಿಟಿಡಿ ತನಿಖೆಯಿಂದ ಹೊರಬಿದ್ದಿದೆ. ಈ ವಂಚನೆಯಿಂದ ಟ್ರಸ್ಟ್‌ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ನಿರ್ದೇಶನದ ಮೇರೆಗೆ ವಿಜಿಲೆನ್ಸ್ ಹಾಗೂ ಭದ್ರತಾ ವಿಭಾಗ ನಡೆಸಿದ ತಪಾಸಣೆಯಲ್ಲಿ ಈ ಅಕ್ರಮ ಪತ್ತೆಯಾಗಿದೆ. ಟೆಂಡರ್ ವಿವರಗಳ ಪ್ರಕಾರ ಶುದ್ಧ ಮಲ್ಬೆರಿ ರೇಷ್ಮೆಯಿಂದ, ನಿಗದಿತ ಗಾತ್ರ ತೂಕದೊಂದಿಗೆ, ಸಂಸ್ಕೃತ ಹಾಗೂ ತೆಲುಗಿನಲ್ಲಿ “ಓಂ ನಮೋ ವೆಂಕಟೇಶಾಯ” ಮುದ್ರಿತ ದುಪಟ್ಟಾಗಳನ್ನೇ ಪೂರೈಸಬೇಕಿತ್ತು. ಆದರೆ ಗೋದಾಮುಗಳಲ್ಲಿ ಲಭ್ಯವಿದ್ದ ವಸ್ತುಗಳು ರೇಷ್ಮೆಯದ್ದೇ ಅಲ್ಲ ಎಂಬುದು ಸ್ಪಷ್ಟವಾಗಿದೆ.
ತಿರುಪತಿ ಹಾಗೂ ತಿರುಮಲದ ವಿವಿಧ ಸಂಗ್ರಹ ಕೇಂದ್ರಗಳಿಂದ ಸಂಗ್ರಹಿಸಿದ ಮಾದರಿಗಳನ್ನು ಬೆಂಗಳೂರು ಮತ್ತು ಧರ್ಮಾವರಂನ ಕೇಂದ್ರ ರೇಷ್ಮೆ ಮಂಡಳಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಎಲ್ಲ ದುಪಟ್ಟಾಗಳೂ 100 ಶೇಕಡಾ ಪಾಲಿಯೆಸ್ಟರ್ ಎಂದು ದೃಢಪಟ್ಟಿದೆ. ಕಡ್ಡಾಯ ರೇಷ್ಮೆ ಹೊಲೊಗ್ರಾಂ ಟ್ಯಾಗ್‌ಗಳೂ ಕಾಣಿಸಿರಲಿಲ್ಲ.
2015ರಿಂದ 2025ರವರೆಗೆ ವಿಆರ್‌ಎಸ್ ಎಕ್ಸ್‌ಪೋರ್ಟ್ ಸಂಸ್ಥೆಯು ಸುಮಾರು 54.95 ಕೋಟಿ ರೂ. ಮೌಲ್ಯದ ಬಟ್ಟೆಗಳನ್ನು ಪೂರೈಸಿದ್ದಾಗಿ ದಾಖಲೆಗಳಿವೆ. ಈ ಹಿನ್ನೆಲೆ ಪ್ರಕರಣವನ್ನು ಪೂರ್ಣ ತನಿಖೆಗಾಗಿ ಆಂಧ್ರಪ್ರದೇಶ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹಸ್ತಾಂತರಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಟಿಟಿಡಿ ಸಜ್ಜಾಗಿದೆ.

