Friday, December 12, 2025

ಸೇಂಟ್ ಪೀಟರ್ಸ್‌ಬರ್ಗ್ ಮಾರುಕಟ್ಟೆಯಲ್ಲಿ ಅಗ್ನಿ ಅನಾಹುತ: ಓರ್ವ ಸಾವು, 100 ಜನರ ಸ್ಥಳಾಂತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದ ಪ್ರಮುಖ ನಗರವಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ನೆವ್ಸ್ಕಿ ಜಿಲ್ಲೆಯ ಪ್ರಾವೊಬೆರೆಜ್ನಿ ಮಾರುಕಟ್ಟೆಯು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಉಲಿಟ್ಸಾ ಡೈಬೆಂಕೊದಲ್ಲಿರುವ ಎರಡು ಅಂತಸ್ತಿನ ಮಾರುಕಟ್ಟೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಬೆಂಕಿಯ ತೀವ್ರತೆಯನ್ನು ಗಮನಿಸಿ ಮಾರುಕಟ್ಟೆಯಿಂದ ಸುಮಾರು 100 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ವರದಿಗಳ ಪ್ರಕಾರ, ಬೆಂಕಿಯು ಐತಿಹಾಸಿಕ ಸೋವಿಯತ್ ಕಾಲದ ಸಂಕೀರ್ಣಕ್ಕೆ ಹರಡಿದ್ದು, ಅಂದಾಜು 1,500 ಚದರ ಮೀಟರ್ ಪ್ರದೇಶದಲ್ಲಿ ಹಾನಿ ಸಂಭವಿಸಿದೆ. ಮಾರುಕಟ್ಟೆಯ ಛಾವಣಿಯ ಮೂಲಕ ಬೆಂಕಿಯ ಜ್ವಾಲೆಗಳು ಮುಗಿಲೆತ್ತರಕ್ಕೆ ಹಾರುತ್ತಿರುವುದು ವಿಡಿಯೋಗಳಲ್ಲಿ ಸೆರೆಯಾಗಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ತೀವ್ರವಾಗಿ ಶ್ರಮಿಸುತ್ತಿದ್ದಾರೆ.

ಬೆಂಕಿಗೆ ಕಾರಣವೇನು?

ಬೆಂಕಿ ಕಾಣಿಸಿಕೊಂಡಿದ್ದಕ್ಕೆ ನಿಖರ ಕಾರಣಗಳು ತಕ್ಷಣಕ್ಕೆ ತಿಳಿದುಬಂದಿಲ್ಲ. ಕ್ರಿಸ್‌ಮಸ್ ಸಮಯವಾದ್ದರಿಂದ ಮಾರುಕಟ್ಟೆಯಲ್ಲಿ ಪಟಾಕಿಗಳಂತಹ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಗ್ರಹಣೆಯೇ ಬೆಂಕಿ ವೇಗವಾಗಿ ಹರಡಲು ಕಾರಣವಾಯಿತೇ ಅಥವಾ ಯಾವುದೇ ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆದಿದೆಯೇ ಎಂಬುದರ ಕುರಿತು ತನಿಖೆ ನಡೆಯಬೇಕಿದೆ.

error: Content is protected !!