Friday, December 12, 2025

ಅಮೆರಿಕಾದ ಬೆನ್ನಲ್ಲೇ ಭಾರತಕ್ಕೆ ಮೆಕ್ಸಿಕೋದಿಂದ ಸುಂಕ ಸಮರದ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾದಿಂದ ಈಗಾಗಲೇ ವ್ಯಾಪಾರ ಸಮರದ ಎದುರಿಸುತ್ತಿರುವ ಭಾರತಕ್ಕೆ ಇದೀಗ ಮೆಕ್ಸಿಕೋ ಮತ್ತೊಂದು ಆರ್ಥಿಕ ಸವಾಲನ್ನು ಒಡ್ಡಿದೆ. 2026 ರಿಂದ ಭಾರತ, ಚೀನಾ ಸೇರಿದಂತೆ ವ್ಯಾಪಾರ ಒಪ್ಪಂದವಿಲ್ಲದ ಏಷ್ಯಾದ ದೇಶಗಳಿಂದ ಬರುವ 1,400ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಶೇ. 5 ರಿಂದ ಶೇ. 50 ರವರೆಗೆ ಆಮದು ಸುಂಕ ವಿಧಿಸುವ ಮಸೂದೆಗೆ ಮೆಕ್ಸಿಕನ್ ಸಂಸತ್ತಿನ ಮೇಲ್ಮನೆಯು ಬುಧವಾರ ಅಂತಿಮ ಅನುಮೋದನೆ ನೀಡಿದೆ.

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಅಮೇರಿಕಾ ಫಸ್ಟ್’ ಕಾರ್ಯಸೂಚಿಯಂತೆಯೇ ಮೆಕ್ಸಿಕೋದ ಹೊಸ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರು ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ನೀಡಲು ಮತ್ತು ಅವುಗಳನ್ನು ವಿದೇಶಿ ಸ್ಪರ್ಧೆಯಿಂದ ರಕ್ಷಿಸಲು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಮಸೂದೆಗೆ ಮೇಲ್ಮನೆಯಲ್ಲಿ 76 ಸದಸ್ಯರು ಪರವಾಗಿ ಮತ್ತು ಕೇವಲ 5 ಸದಸ್ಯರು ವಿರೋಧವಾಗಿ ಮತ ಚಲಾಯಿಸುವುದರ ಮೂಲಕ ಭಾರೀ ಬಹುಮತದೊಂದಿಗೆ ಅಂಗೀಕಾರಗೊಂಡಿದೆ.

ಯಾವ ಉತ್ಪನ್ನಗಳ ಮೇಲೆ ಪರಿಣಾಮ?

ಈ ಹೊಸ ಸುಂಕವು ಚೀನಾ, ಭಾರತ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ದೇಶಗಳಿಂದ ಆಮದಾಗುವ ಆಟೋ ಭಾಗಗಳು, ಜವಳಿ, ಪ್ಲಾಸ್ಟಿಕ್‌ಗಳು, ಬಟ್ಟೆ ಮತ್ತು ಉಕ್ಕು ಸೇರಿದಂತೆ ಹಲವು ಸರಕುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಮಸೂದೆಯು ಈಗಾಗಲೇ ಕೆಳಮನೆಯಲ್ಲಿಯೂ ಅಂಗೀಕಾರ ಪಡೆದಿತ್ತು.

ಭಾರತವು ಸಾಫ್ಟ್‌ವೇರ್ ಮತ್ತು ಔಷಧಗಳನ್ನು ಮೆಕ್ಸಿಕೋಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತದೆಯಾದರೂ, ಈ ಹೊಸ ಸುಂಕದಿಂದ ಪ್ರಮುಖವಾಗಿ ಆಟೋಮೊಬೈಲ್ ಕ್ಷೇತ್ರಕ್ಕೆ ಹಿನ್ನಡೆಯಾಗಬಹುದು.

ಒಟ್ಟಾರೆಯಾಗಿ, ಈ ಮಸೂದೆಯ ಜಾರಿಯು 2026 ರಿಂದ ಮೆಕ್ಸಿಕೋಗೆ ಭಾರತದ ರಫ್ತು ಉತ್ಪನ್ನಗಳನ್ನು ದುಬಾರಿಗೊಳಿಸಲಿದ್ದು, ಭಾರತೀಯ ಉದ್ಯಮದ ಮೇಲೆ ದೊಡ್ಡ ಹೊಡೆತ ನೀಡುವ ಆತಂಕ ಸೃಷ್ಟಿಸಿದೆ.

error: Content is protected !!