ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ಚಳಿಗಾಲದ ಅಧಿವೇಶನವು ಚುನಾವಣಾ ಸುಧಾರಣೆಗಳ ಕುರಿತು ನಡೆಯುತ್ತಿರುವ ಕಾವೇರಿದ ಚರ್ಚೆಗಳೊಂದಿಗೆ ಶುರುವಾಗಿದ್ದು, ಇದರ ಕೇಂದ್ರಬಿಂದುವಾಗಿ ವಿಶೇಷ ತೀವ್ರ ಪರಿಷ್ಕರಣೆ ಕುರಿತ ವಿವಾದ ಭುಗಿಲೆದ್ದಿದೆ. ವಿರೋಧ ಪಕ್ಷಗಳು SIR ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ಸಂದರ್ಭದಲ್ಲಿ, ದೇಶದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳನ್ನು ‘ನುಸುಳುಕೋರರು’ ಆಯ್ಕೆ ಮಾಡುವುದಿಲ್ಲ, ಆದ್ದರಿಂದ SIR ಅತ್ಯಗತ್ಯ ಎಂದು ಆಡಳಿತ ಪಕ್ಷವು ಬಲವಾಗಿ ವಾದಿಸಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ವಿರೋಧ ಪಕ್ಷಗಳ ಟೀಕೆಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದೊಳಗೇ ವಿಶೇಷ ತೀವ್ರ ಪರಿಷ್ಕರಣೆಯ ತಕ್ಷಣದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಜೋಶಿ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಗುರಿಯಾಗಿಸಿ, “ಕಾಂಗ್ರೆಸ್ ಪಕ್ಷದಲ್ಲಿ ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹೀಗೆ ಬರೀ ನಕಲಿ ಗಾಂಧಿಗಳದ್ದೇ ಅಧಿಕಾರ ಮುಂಚೂಣಿಯಲ್ಲಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದೊಳಗೇ ಮೊದಲು SIR ನಡೆಯಬೇಕಿದೆ,” ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷದೊಳಗೆ ಈ ‘ವಿಶೇಷ ತೀವ್ರ ಪರಿಷ್ಕರಣೆ’ ನಡೆದರೆ ಮಾತ್ರ ಅದು ಉಳಿಯುತ್ತದೆ, ಇಲ್ಲದಿದ್ದರೆ ಪಕ್ಷವು ನಾಶವಾಗುತ್ತದೆ ಎಂದು ಅವರು ಸ್ಪಷ್ಟವಾಗಿ ಎಚ್ಚರಿಸಿದ್ದಾರೆ. ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಅನ್ನು ತೀವ್ರವಾಗಿ ಟೀಕಿಸಿದ ಬೆನ್ನಲ್ಲೇ ಜೋಶಿ ಅವರ ಈ ಹೇಳಿಕೆ ಹೊರಬಿದ್ದಿದೆ.

