ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ತೊಗರಿ ಬೆಳೆಗಾರರಿಗೆ ಕೇಂದ್ರ ಸರ್ಕಾರವು ಭಾರಿ ಸಿಹಿ ಸುದ್ದಿ ನೀಡಿದೆ. ರೈತರಿಂದ ಕನಿಷ್ಠ ಬೆಂಬಲ ಬೆಲೆ ದರದಲ್ಲಿ ತೊಗರಿಯನ್ನು ಖರೀದಿಸಲು ಕೇಂದ್ರ ಕೃಷಿ ಸಚಿವಾಲಯವು ಒಪ್ಪಿಗೆ ನೀಡಿದೆ ಎಂದು ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಸುವರ್ಣಸೌಧದಲ್ಲಿಂದು ಪ್ರಕಟಿಸಿದ್ದಾರೆ.
ಕಳೆದ ರಾತ್ರಿ ಕೇಂದ್ರದ ಕೃಷಿ ಸಚಿವರು ತಮಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದು, ಶೀಘ್ರದಲ್ಲೇ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಕೇಂದ್ರ ಸಚಿವರಿಗೆ ಅವರು ಅಭಿನಂದನೆ ಸಲ್ಲಿಸಿದರು.
ತೊಗರಿ ಬೆಳೆಯಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕವು ಎರಡನೇ ಅತಿದೊಡ್ಡ ರಾಜ್ಯವಾಗಿದೆ. ಸದ್ಯ ಕೇಂದ್ರ ಸರ್ಕಾರವು ರಾಜ್ಯದಲ್ಲಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಖರೀದಿಸಲು ಅನುಮತಿ ನೀಡಿದೆ. ಈ ಮಹತ್ವದ ನಿರ್ಧಾರದ ಹಿಂದೆ ರಾಜ್ಯದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸಂಸದರ ಸಾಮೂಹಿಕ ಒತ್ತಡ ಕೆಲಸ ಮಾಡಿದೆ. ಅಲ್ಲದೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈ ವಿಚಾರದಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದಾರೆ ಎಂದು ಚಲುವರಾಯಸ್ವಾಮಿ ಅವರು ಎಲ್ಲರಿಗೂ ಧನ್ಯವಾದ ತಿಳಿಸಿದರು.
ತೊಗರಿಯ ಬೆನ್ನಲ್ಲೇ, ರಾಜ್ಯದ ಮತ್ತೊಂದು ಪ್ರಮುಖ ಬೆಳೆಯಾದ ಮೆಕ್ಕೆಜೋಳಕ್ಕೂ ಕೇಂದ್ರ ಸರ್ಕಾರವು ಬೆಂಬಲ ಬೆಲೆ ನೀಡಬೇಕೆಂದು ಕೃಷಿ ಸಚಿವರು ಆಗ್ರಹಿಸಿದ್ದಾರೆ. “ಪ್ರಹ್ಲಾದ ಜೋಶಿ ಅವರು ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ. ಅವರು ಮನಸ್ಸು ಮಾಡಿದರೆ ಮೆಕ್ಕೆಜೋಳಕ್ಕೂ ಬೆಂಬಲ ಬೆಲೆ ಸಿಗುವಂತಾಗಲಿದೆ. ಈ ಸಂಬಂಧ ನಾನು ಅವರೊಂದಿಗೆ ಮಾತನಾಡಲಿದ್ದೇನೆ” ಎಂದು ಸಚಿವ ಚಲುವರಾಯಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

