ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಕ್ರೋಸಾಫ್ಟ್ ಟೆಕ್ನಿಕಲ್ ಸಪೋರ್ಟ್ ಸಿಬ್ಬಂದಿಯ ಸೋಗಿನಲ್ಲಿ ಅಮೆರಿಕ ಮತ್ತು ಬ್ರಿಟನ್ ದೇಶದ ಪ್ರಜೆಗಳಿಗೆ ಬೃಹತ್ ಮೊತ್ತದ ಸೈಬರ್ ವಂಚನೆ ಮಾಡುತ್ತಿದ್ದ ಬೆಂಗಳೂರು ಮೂಲದ ಗ್ಯಾಂಗ್ ಒಂದನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಪ್ರಮುಖ ಸೂತ್ರಧಾರ ಸೇರಿದಂತೆ ಒಟ್ಟು 22 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸ್ ತನಿಖೆಯಿಂದ ಸ್ಫೋಟಕ ಸಂಗತಿಗಳು ಬಯಲಾಗಿದ್ದು, ವಂಚಕರು ಆಗಸ್ಟ್‌ನಿಂದೀಚೆಗೆ ಸುಮಾರು 150ಕ್ಕೂ ಹೆಚ್ಚು ಪಾಶ್ಚಾತ್ಯ ಪ್ರಜೆಗಳನ್ನು ಗುರಿಯಾಗಿಸಿ, ಲಕ್ಷಾಂತರ ಡಾಲರ್ ಹಣವನ್ನು ಬಿಟ್‌ಕಾಯಿನ್ ಮೂಲಕ ದೋಚಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳು, ವೈಟ್‌ಫೀಲ್ಡ್‌ನಲ್ಲಿರುವ ‘ಮಸ್ಕ್ ಕಮ್ಯುನಿಕೇಷನ್ಸ್’ ಎಂಬ ಕಚೇರಿ ಮೇಲೆ ಬೆಂಗಳೂರು ಪೊಲೀಸ್ ಸೈಬರ್ ಕಮಾಂಡ್‌ನ ವಿಶೇಷ ತಂಡಗಳು ಮತ್ತು ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಯ ತನಿಖಾಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದರು.
ನವೆಂಬರ್ 14 ಮತ್ತು 15 ರಂದು ವೈಟ್‌ಫೀಲ್ಡ್ ಮುಖ್ಯ ರಸ್ತೆಯ ಸಿಗ್ಮಾ ಸಾಫ್ಟ್ ಟೆಕ್ ಪಾರ್ಕ್‌ನ ಡೆಲ್ಟಾ ಕಟ್ಟಡದ 6ನೇ ಮಹಡಿಯಲ್ಲಿದ್ದ ಮಸ್ಕ್ ಕಮ್ಯುನಿಕೇಷನ್ಸ್ ಕಚೇರಿ ಮೇಲೆ ದಾಳಿ ನಡೆಯಿತು.
ವಂಚನೆಗೆ ಬಳಸಲಾಗುತ್ತಿದ್ದ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಹಾರ್ಡ್ ಡಿಸ್ಕ್‌ಗಳು ಮತ್ತು ಮೊಬೈಲ್ ಫೋನ್‌ಗಳು ಸೇರಿದಂತೆ ಹಲವು ಸಾಧನಗಳನ್ನು ವಶಪಡಿಸಿಕೊಳ್ಳಲಾಯಿತು.
ಕಾರ್ಯಾಚರಣೆಯ ಎರಡು ದಿನಗಳ ಅವಧಿಯಲ್ಲಿ ಕಚೇರಿಯಲ್ಲಿದ್ದ 21 ಸಿಬ್ಬಂದಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಆರೋಪಿಗಳು ಮೈಕ್ರೋಸಾಫ್ಟ್ ಟೆಕ್ನಿಕಲ್ ಸಪೋರ್ಟ್ ಸಿಬ್ಬಂದಿಯಂತೆ ಕರೆ ಮಾಡಿ, ತಮ್ಮ ಸಂತ್ರಸ್ತರಿಗೆ ಸುಳ್ಳು ಟೆಕ್ನಿಕಲ್ ಸಮಸ್ಯೆಗಳನ್ನು ಹೇಳುತ್ತಿದ್ದರು. ಇದರ ಜೊತೆಗೆ, ನಕಲಿ ‘ಫೆಡರಲ್ ಟ್ರೇಡ್ ಕಮಿಷನ್’ ಉಲ್ಲಂಘನೆಗಳನ್ನು ಉಲ್ಲೇಖಿಸಿ ಬೆದರಿಕೆ ಹಾಕುತ್ತಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತರಿಂದ ಹಣವನ್ನು ವರ್ಗಾಯಿಸಲು ವಂಚಕರು ಹೈಟೆಕ್ ಮಾರ್ಗ ಅನುಸರಿಸಿದ್ದಾರೆ. ಸಂತ್ರಸ್ತರು ಹಣವನ್ನು ಬಿಟ್‌ಕಾಯಿನ್ ಎಟಿಎಂಗಳಲ್ಲಿ ಠೇವಣಿ ಇಡುವಂತೆ ಒತ್ತಾಯಿಸಲಾಗುತ್ತಿತ್ತು. ಈ ಬಿಟ್‌ಕಾಯಿನ್ ಎಟಿಎಂಗಳು ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಅನುವು ಮಾಡಿಕೊಡುತ್ತವೆ.
ಈವರೆಗೆ ಬ್ರಿಟನ್ ಮತ್ತು ಅಮೆರಿಕದ ಕನಿಷ್ಠ 150 ಮಂದಿ ಗ್ರಾಹಕರು ಪ್ರತಿ ವಹಿವಾಟಿನಲ್ಲಿ ಸರಾಸರಿ 10,000 ವನ್ನು ವಿವಿಧ ಬಿಟ್‌ಕಾಯಿನ್ ಎಟಿಎಂಗಳಲ್ಲಿ ಠೇವಣಿ ಇಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತರ ಬ್ಯಾಂಕ್ ವಿವರಗಳನ್ನು ಪಡೆಯುವ ಪ್ರಯತ್ನ ನಡೆಯುತ್ತಿದೆ.
ಈ ಜಾಲದ ಪ್ರಮುಖ ಸೂತ್ರಧಾರ ಎನ್ನಲಾದ, ಅಹಮದಾಬಾದ್ ಮೂಲದ ರವಿ ಚೌಹಾಣ್ ಎಂಬ ವ್ಯಕ್ತಿಯನ್ನು ಪೊಲೀಸರು ತರುವಾಯ ಬಂಧಿಸಿದ್ದಾರೆ. ಆತನೇ ಈ ನಕಲಿ ಸಪೋರ್ಟ್ ಸೆಂಟರ್‌ಗಾಗಿ ಬೆಂಗಳೂರಿನಲ್ಲಿ ಸುಮಾರು 85 ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದ ಎನ್ನಲಾಗಿದೆ. ರವಿ ಚೌಹಾಣ್ ಬಂಧನದೊಂದಿಗೆ, ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

