ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಬ್ಬಂದಿ ಕೊರತೆಯ ಭಾರಿ ಬಿಕ್ಕಟ್ಟಿನಿಂದಾಗಿ ಡಿಸೆಂಬರ್ 3ರಿಂದ 5ರ ನಡುವೆ ಸಾವಿರಾರು ಇಂಡಿಗೋ ವಿಮಾನಗಳು ರದ್ದಾದ ಪರಿಣಾಮ, ವಿಮಾನ ನಿಲ್ದಾಣಗಳಲ್ಲಿ ಉಂಟಾದ ದಟ್ಟಣೆ ಮತ್ತು ಗೊಂದಲದಲ್ಲಿ ಗಂಟೆಗಟ್ಟಲೆ ಸಿಲುಕಿ ತೀವ್ರವಾಗಿ ತೊಂದರೆ ಅನುಭವಿಸಿದ ಗ್ರಾಹಕರಿಗೆ ಪರಿಹಾರ ನೀಡಲು ಇಂಡಿಗೋ ವಿಮಾನಯಾನ ಸಂಸ್ಥೆ ಮುಂದಾಗಿದೆ.
ಸಂಕಷ್ಟ ಅನುಭವಿಸಿದ ಈ ಗ್ರಾಹಕರಿಗೆ 10,000 ಮೌಲ್ಯದ ಪ್ರಯಾಣ ವೋಚರ್‌ಗಳನ್ನು ನೀಡುವುದಾಗಿ ಇಂಡಿಗೋ ಘೋಷಿಸಿದೆ. ಈ ವೋಚರ್‌ಗಳನ್ನು ಮುಂದಿನ 12 ತಿಂಗಳುಗಳ ಅವಧಿಯಲ್ಲಿ ಯಾವುದೇ ಇಂಡಿಗೋ ವಿಮಾನ ಪ್ರಯಾಣಕ್ಕಾಗಿ ಬಳಸಬಹುದಾಗಿದೆ.
ಇಂಡಿಗೋ ಸ್ಪಷ್ಟನೆ ಏನು?
“ಡಿಸೆಂಬರ್ 3, 4, ಮತ್ತು 5 ರಂದು ಪ್ರಯಾಣಿಸುತ್ತಿದ್ದ ನಮ್ಮ ಕೆಲವು ಗ್ರಾಹಕರು ಕೆಲವು ವಿಮಾನ ನಿಲ್ದಾಣಗಳಲ್ಲಿ ಹಲವು ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಅವರಲ್ಲಿ ಹಲವರು ‘ತೀವ್ರವಾಗಿ ಪರಿಣಾಮ ಎದುರಿಸಿದ್ದರು’ ಎಂಬುದನ್ನು ಇಂಡಿಗೋ ವಿಷಾದದಿಂದ ಒಪ್ಪಿಕೊಳ್ಳುತ್ತದೆ ಮತ್ತು ಇದಕ್ಕಾಗಿ ಕ್ಷಮೆಯನ್ನೂ ಕೋರುತ್ತದೆ. ಅಂತಹ ತೀವ್ರ ಪರಿಣಾಮ ಬೀರಿದ ಗ್ರಾಹಕರಿಗೆ ನಾವು 10,000 ಮೌಲ್ಯದ ಪ್ರಯಾಣ ವೋಚರ್‌ಗಳನ್ನು ನೀಡುತ್ತೇವೆ,” ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈಗಾಗಲೇ ರದ್ದಾದ ವಿಮಾನಗಳಿಗೆ ಸಂಬಂಧಿಸಿದಂತೆ ಅಗತ್ಯವಾದ ಮರುಪಾವತಿಯನ್ನು ಇಂಡಿಗೋ ಪ್ರಯಾಣಿಕರಿಗೆ ಮಾಡಿದೆ.
ಆದಾಗ್ಯೂ, ಇಂಡಿಗೋ ತನ್ನ ಹೇಳಿಕೆಯಲ್ಲಿ ಒಂದು ಪ್ರಮುಖ ಅಂಶವನ್ನು ಸ್ಪಷ್ಟಪಡಿಸಿಲ್ಲ: ‘ತೀವ್ರವಾಗಿ ಪರಿಣಾಮ ಎದುರಿಸಿದ’ ಪ್ರಯಾಣಿಕರು ಯಾರು? ಅವರನ್ನು ಹೇಗೆ ಗುರುತಿಸಲಾಗುತ್ತದೆ? ಎಂಬುದರ ಮಾನದಂಡಗಳನ್ನು ವಿಮಾನಯಾನ ಸಂಸ್ಥೆ ಪ್ರಕಟಿಸಿಲ್ಲ. ಈ ಕುರಿತು ಮತ್ತಷ್ಟು ಸ್ಪಷ್ಟೀಕರಣಕ್ಕಾಗಿ ಗ್ರಾಹಕರು ಕಾದು ನೋಡುತ್ತಿದ್ದಾರೆ.
ಮುಂದಿನ 12 ತಿಂಗಳೊಳಗೆ ಈ ವೋಚರ್‌ಗಳನ್ನು ಬಳಸಿಕೊಂಡು ‘ಇಂಡಿಗೋದಲ್ಲಿ ನಿಮಗೆ ಮತ್ತೆ ಸೇವೆ ಸಲ್ಲಿಸಲು ನಮಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು’ ಎಂದು ವಿಮಾನಯಾನ ಸಂಸ್ಥೆ ಗ್ರಾಹಕರನ್ನು ಉದ್ದೇಶಿಸಿ ಹೇಳಿದೆ.

