ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ದೆಹಲಿಯಲ್ಲಿ ನಿನ್ನೆ ಸಭೆ ಸೇರಿ ಮುಂದಿನ ಮುಖ್ಯ ಮಾಹಿತಿ ಆಯುಕ್ತರು (CIC) ಮತ್ತು ಎಂಟು ಮಾಹಿತಿ ಆಯುಕ್ತರ ನೇಮಕ ಬಗ್ಗೆ ನಿರ್ಧರಿಸಿದೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರು.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನೇಮಕಗೊಂಡ ಅಧಿಕಾರಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಕೋರಿದರು. ಮುಖ್ಯ ಮಾಹಿತಿ ಆಯುಕ್ತರು ಮತ್ತು ಇತರ ಎಂಟು ಮಾಹಿತಿ ಆಯುಕ್ತರ ಆಯ್ಕೆಗೆ ಅಳವಡಿಸಿಕೊಂಡ ಮಾನದಂಡ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಆಯ್ಕೆ ಪ್ರಕ್ರಿಯೆಯಿಂದ ಅತೃಪ್ತರಾದ ರಾಹುಲ್ ಗಾಂಧಿ ತಮ್ಮ ಭಿನ್ನಾಭಿಪ್ರಾಯ ಪತ್ರವನ್ನು ಮಂಡಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹುದ್ದೆಗಳಿಗೆ ಅರ್ಜಿದಾರರ ಜಾತಿವಾರು ಮಾಹಿತಿಯನ್ನು ರಾಹುಲ್ ಗಾಂಧಿಯವರು ಕೇಳಿದ್ದು, ಅರ್ಜಿದಾರರ ಗುಂಪಿನಲ್ಲಿ ಶೇ. 7ಕ್ಕಿಂತ ಕಡಿಮೆ ಜನರು ಬಹುಜನ ಬಹುಸಂಖ್ಯಾತ ಸಮುದಾಯಗಳಿಂದ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸಂಸತ್ತಿನ ಕಾರಿಡಾರ್‌ಗಳಲ್ಲಿ ಚರ್ಚೆ ತೀವ್ರವಾಗಿದ್ದು, ಕೇಂದ್ರ ಮಾಹಿತಿ ಆಯೋಗದಲ್ಲಿ ಮುಖ್ಯ ಆಯುಕ್ತರ ಹುದ್ದೆಯೂ ಸೇರಿದಂತೆ ಒಟ್ಟು 8 ಹುದ್ದೆಗಳು ಖಾಲಿಯಿವೆ. ಆರ್‌ಟಿಐ ಅರ್ಜಿದಾರರು ಸಲ್ಲಿಸಿರುವ ದೂರುಗಳು ಮತ್ತು ಮೇಲ್ಮನವಿಗಳನ್ನು ಅಧಿಕಾರಿಗಳೇ ಪರಿಶೀಲಿಸುತ್ತಾರೆ. ಸೆಪ್ಟೆಂಬರ್ ಮಧ್ಯದವರೆಗೆ ಹಿರಾಲಾಲ್ ಸಮಾರಿಯಾ ಭಾರತದ ಮುಖ್ಯ ಮಾಹಿತಿ ಆಯುಕ್ತರಾಗಿ ಸೇವೆ ಸಲ್ಲಿಸಿದರು. ಸೆಪ್ಟೆಂಬರ್ 13 ರಂದು ಅವರು ನಿವೃತ್ತಿ ಹೊಂದಿದ ಬಳಿಕ ಈ ಹುದ್ದೆ ಖಾಲಿಯಾಗಿದೆ. ಪ್ರಸ್ತುತ ಇಲಾಖೆಯಲ್ಲಿ ಕೇವಲ ಇಬ್ಬರು ಮಾಹಿತಿ ಆಯುಕ್ತರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 12(3) ರ ಅಡಿಯಲ್ಲಿ, ಪ್ರಧಾನ ಮಂತ್ರಿಗಳು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕಾತಿಗೆ ಹೆಸರುಗಳನ್ನು ಆಯ್ಕೆ ಮಾಡಲು ಮತ್ತು ಶಿಫಾರಸು ಮಾಡಲು ವಿರೋಧ ಪಕ್ಷದ ನಾಯಕರು ಮತ್ತು ಪ್ರಧಾನ ಮಂತ್ರಿಗಳು ನಾಮನಿರ್ದೇಶನ ಮಾಡಿದ ಕೇಂದ್ರ ಸಚಿವರು ಇರುತ್ತಾರೆ.

