ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿ ಡೆವಿಲ್ʼ ಸಿನಿಮಾ ಪೊಲಿಟಿಕಲ್ ಫ್ಯಾಮಿಲಿಯ ಮೆಗಾ ಡ್ರಾಮಾ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಗ್ರ್ಯಾಂಡ್ ಆಗಿ ಬಿಡುಗಡೆ ಆಗಿದೆ.
ದರ್ಶನ ಜೊತೆ ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್ ಮುಂತಾದ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ.
‘ಮಿಲನ’, ‘ತಾರಕ್’ ಖ್ಯಾತಿಯ ನಿರ್ದೇಶಕ ಪ್ರಕಾಶ್ ವೀರ್ ಅವರು ‘ದಿ ಡೆವಿಲ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಇನ್ನು ಸಿನಿಮಾದಲ್ಲಿ ಏನುಂಟು, ಏನಿಲ್ಲ ತಿಳಿಯಲು ಈ ವಿಮರ್ಶೆ ಓದಿ.
ಟ್ರೇಲರ್ನಲ್ಲಿ ಸುಳಿವು ನೀಡಿದಂತೆಯೇ ‘ದಿ ಡೆವಿಲ್’ ಸಿನಿಮಾದಲ್ಲಿ ದರ್ಶನ್ ಅವರು ದ್ವಿಪಾತ್ರ ಮಾಡಿದ್ದಾರೆ. ಒಂದು ನೆಗೆಟಿವ್, ಇನ್ನೊಂದು ಪಾಸಿಟಿವ್. ಎರಡೂ ಪಾತ್ರಗಳಿಗೆ ಅವರು ನ್ಯಾಯ ಒದಗಿಸಿದ್ದಾರೆ. ʻದಿ ಡೆವಿಲ್ʼ ಸಿನಿಮಾದಲ್ಲಿ ದರ್ಶನ್‌ಗೆ ಡಬಲ್ ರೋಲ್. ಒಂದು ಸಿನಿಮಾ ನಟನಾಗಬೇಕೆಂದು ಪರಿತಪಿಸುವ ಸಾದಾಸೀದಾ ಮಿಡಲ್ ಕ್ಲಾಸ್ ಹೈದ, ಮತ್ತೊಂದು ಸಕಲ ದುರ್ಗುಣಗಳನ್ನು ಅರೆದು ಕುಡಿದು ವಿದೇಶದಲ್ಲಿರುವ ಡೆವಿಲ್! ಇವೆರಡೂ ಪಾತ್ರಗಳನ್ನು ದರ್ಶನ್ ಅವರು ಉತ್ತಮವಾಗಿ ನಿಭಾಯಿಸಿದ್ದಾರೆ.
ಭ್ರಷ್ಟಾಚಾರದ ಆರೋಪದಿಂದ ಮುಖ್ಯಮಂತ್ರಿ ರಾಜಶೇಖರ್ (ಮಹೇಶ್ ಮಂಜ್ರೇಕರ್) ಸ್ಥಾನಕ್ಕೆ ಕುತ್ತು ಬರುತ್ತದೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ತನ್ನ ಮಗ ಧನುಷ್ (ದರ್ಶನ್) ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕು ಎಂಬುದು ರಾಜಶೇಖರ್ ಉದ್ದೇಶ. ಆದರೆ ಧನುಷ್ ಪಕ್ಕಾ ವಿಲನ್! ಅವನ ಬದಲು ಅವನ ರೀತಿಯೇ ಕಾಣುವ ಕೃಷ್ಣ ಎಂಬ ವ್ಯಕ್ತಿಯನ್ನು ಧನುಷ್ ಎಂದು ತೋರಿಸಿ ಜನರನ್ನು ನಂಬಿಸಲಾಗುತ್ತದೆ. ಅಂತಿಮವಾಗಿ ಈ ರಹಸ್ಯ ಎಲ್ಲಿಯವರೆಗೆ ಸಾಗುತ್ತದೆ? ಅಖಾಡಕ್ಕೆ ರಿಯಲ್ ಧನುಷ್ ಎಂಟ್ರಿ ನೀಡಿದಾಗ ಏನೆಲ್ಲ ಸಂಘರ್ಷಗಳು ಆಗುತ್ತವೆ ಎಂಬುದೇ ‘ದಿ ಡೆವಿಲ್’ ಸಿನಿಮಾದ ಕಥೆ.
ಈ ಮೊದಲು ದರ್ಶನ್ ಅವರು ಪೂರ್ಣ ಪ್ರಮಾಣದ ರಾಜಕೀಯದ ಕಥೆ ಇರುವ ಸಿನಿಮಾಗಳನ್ನು ಪ್ರಯತ್ನಿಸಿರಲಿಲ್ಲ. ‘ದಿ ಡೆವಿಲ್’ ಸಿನಿಮಾದಲ್ಲಿ ಸಂಪೂರ್ಣ ಪೊಲಿಟಿಕಲ್ ಕಹಾನಿ ಇದೆ. ಆರಂಭದಿಂದ ಕೊನೇ ತನಕ ಈ ಸಿನಿಮಾದ ಕಥೆ ರಾಜಕೀಯದ ಸುತ್ತವೇ ಸುತ್ತುತ್ತದೆ. ನಟ ದರ್ಶನ್ ಅವರು ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಪಾತ್ರಗಳನ್ನು ತಮ್ಮ ಅಭಿಮಾನಿಗಳಿಗೆ ಇಷ್ಟ ಆಗುವ ರೀತಿಯಲ್ಲಿ ನಿಭಾಯಿಸಿದ್ದಾರೆ.
‘ದಿ ಡೆವಿಲ್’ ಸಿನಿಮಾದಲ್ಲಿ ದರ್ಶನ್ ಬಳಿಕ ಹೆಚ್ಚು ಸ್ಕ್ರೀನ್ ಸ್ಪೇಸ್ ಗಿಟ್ಟಿಸಿರುವುದು ನಟ ಅಚ್ಯುತ್ ಕುಮಾರ್. ಮುಖ್ಯಮಂತ್ರಿಯ ಸಲಹೆಗಾರನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಟಿ ರಚನಾ ರೈ ಅವರು ತಮಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಅವರು ಕಡಿಮೆ ಹೊತ್ತು ಕಾಣಿಸಿಕೊಂಡರೂ ಟ್ವಿಸ್ಟ್ ನೀಡುತ್ತಾರೆ. ಹುಲಿ ಕಾರ್ತಿಕ್ ಮತ್ತು ಗಿಲ್ಲಿ ನಟ ಅವರು ಕಾಮಿಡಿ ಕಚಗುಳಿ ನೀಡಲು ಪ್ರಯತ್ನಿಸಿದ್ದಾರೆ.
ಕಥೆಗೆ ಎಷ್ಟು ಬೇಕೋ ಅಷ್ಟು ಆ್ಯಕ್ಷನ್ ಮಾತ್ರ ಇಟ್ಟಿದ್ದಾರೆ. ಇರುವಷ್ಟು ಸಾಹಸ ದೃಶ್ಯಗಳಲ್ಲೇ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಮಾಸ್ ಮನರಂಜನೆ ನೀಡುತ್ತಾರೆ. ಭರಪೂರ ಆ್ಯಕ್ಷನ್ ಬೇಕು ಎಂದು ಬಯಸುವವರಿಗೆ ಕೊಂಚ ನಿರಾಸೆ ಆಗಬಹುದು.

