Friday, December 12, 2025

‘ಭಿಕ್ಷುಕ’ನ ವೇಷದಲ್ಲಿ ಅಸಭ್ಯ ವರ್ತನೆ: ಸಾರ್ವಜನಿಕರ ಕೈಯಲ್ಲಿ ಧರ್ಮದೇಟು ತಿಂದ ಕಿಡಿಗೇಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಿಕ್ಷಾಟನೆಯ ಸೋಗಿನಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಹುಬ್ಬಳ್ಳಿಯ ಅಮರಗೋಳ ಡಾ.ಬಿ.ಆರ್. ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ತಕ್ಕ ಪಾಠ ಕಲಿಸಿದ್ದಾರೆ.

ಮದ್ಯಪಾನ ಮಾಡಿ ಅಮಲಿನಲ್ಲಿ, ಮನೆ ಮನೆಗೆ ಭೇಟಿ ನೀಡಿ ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸುತ್ತಿದ್ದ ಈ ಕಿಡಿಗೇಡಿಯ ವರ್ತನೆಯಿಂದ ಸ್ಥಳೀಯರು ರೋಸಿ ಹೋಗಿದ್ದರು. ಪದೇ ಪದೇ ಇದೇ ರೀತಿಯ ಕೃತ್ಯ ಎಸಗುತ್ತಿದ್ದ ಈತನನ್ನು ಹಿಡಿದು ಸಾರ್ವಜನಿಕರು ಮನಬಂದಂತೆ ಥಳಿಸಿದ್ದಾರೆ.

ಕಾಲೋನಿಯ ಜನರು ಆಕ್ರೋಶದಿಂದ ಈತನನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದ ದೃಶ್ಯಗಳನ್ನು ಸ್ಥಳೀಯರು ಸೆರೆಹಿಡಿದಿದ್ದು, ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಭಿಕ್ಷಾಟನೆಯ ನೆಪದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರಿಗೆ ಈ ಘಟನೆ ಒಂದು ಎಚ್ಚರಿಕೆಯ ಸಂದೇಶ ನೀಡಿದೆ. ಕಾಲೋನಿ ನಿವಾಸಿಗಳು ತಕ್ಷಣವೇ ಪೊಲೀಸರಿಗೆ ಒಪ್ಪಿಸದೆ ಸ್ವತಃ ಶಿಕ್ಷೆ ನೀಡಲು ಮುಂದಾಗಿದ್ದು, ಕಿಡಿಗೇಡಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

error: Content is protected !!