Friday, December 12, 2025

ಕಾಂಗ್ರೆಸ್​ ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಶಿವರಾಜ್ ಪಾಟೀಲ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ (91) ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೆಲ ತಿಂಗಳಿನಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪಾಟೀಲ್ ಮನೆಯಲ್ಲೇ ವೈದ್ಯಕೀಯ ಆರೈಕೆಯಲ್ಲಿದ್ದರು, ಇಂದು ಬೆಳಗ್ಗೆ ಆರೋಗ್ಯ ಹದಗೆಟ್ಟು ಅವರು ವಿಧಿವಶರಾದರು.

ಲಾತೂರ್‌ನ ರಾಜಕೀಯಕ್ಕೆ ಶಕ್ತಿ ನೀಡಿದ ಮುಖವಾಗಿ ಗುರುತಿಸಿಕೊಂಡಿದ್ದ ಶಿವರಾಜ್ ಪಾಟೀಲ್, 1980 ರಿಂದ 2004 ರವರೆಗೆ ಸತತ ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿ ದಾಖಲೆ ಬರೆದಿದ್ದರು. ನಂತರವೂ ಹಲವು ಪ್ರಮುಖ ಹುದ್ದೆಗಳನ್ನು ಅವರು ನಿರ್ವಹಿಸಿದರು. 1972 ಮತ್ತು 1978ರಲ್ಲಿ ಲಾತೂರ್ ವಿಧಾನಸಭಾ ಕ್ಷೇತ್ರಕ್ಕೂ ಪ್ರತಿನಿಧಿಸಿದ್ದರು. ತಮ್ಮ ಸ್ವಚ್ಛ ರಾಜಕೀಯ ವ್ಯಕ್ತಿತ್ವ, ಸಂಘಟನೆಯ ಮೇಲೆ ನಿಸ್ವಾರ್ಥ ನಿಷ್ಠೆ, ಮತ್ತು ಅಭಿವೃದ್ಧಿಗೆ ನೀಡಿದ ಆದ್ಯತೆಯಿಂದ ಪಾಟೀಲ್ ಮರಾಠವಾಡದ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದರು.

2008ರ 26/11 ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಪಾಟೀಲ್ ದೇಶದ ಗೃಹ ಸಚಿವರಾಗಿದ್ದರು. ಭದ್ರತಾ ಲೋಪಗಳ ಆರೋಪದ ನಡುವೆ ಅವರು ನೈತಿಕ ಜವಾಬ್ದಾರಿ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಪಾಟೀಲ್ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!