Friday, December 12, 2025

ಎಲ್ಲಾ ‘ಡೈಮಂಡ್’ಗಳು ಒಂದೇ ಅಲ್ಲ! ವಿಧಗಳು, ವ್ಯತ್ಯಾಸಗಳು, ಬೆಲೆಯ ಹಿಂದಿನ ರಹಸ್ಯ ಇಲ್ಲಿದೆ

ವಜ್ರದ ಆಭರಣಗಳು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಚಿನ್ನದಂತೆ ವಜ್ರಕ್ಕೂ ಒಂದು ವಿಶೇಷ ಸ್ಥಾನವಿದೆ. ಆದರೆ, ಒಂದೇ ರೀತಿ ಕಣ್ಣಿಗೆ ಕಾಣುವ ಎಲ್ಲಾ ವಜ್ರದ ಹರಳುಗಳು ಒಂದೇ ಅಲ್ಲ. ಅವುಗಳ ಹೊಳಪು, ಬಣ್ಣ, ವಿನ್ಯಾಸ, ರಾಸಾಯನಿಕ ಸಂಯೋಜನೆ ಮತ್ತು ತಯಾರಿಕೆಯ ವಿಧಾನವನ್ನು ಅವಲಂಬಿಸಿ ವಜ್ರಗಳಲ್ಲಿ ಅದೆಷ್ಟೋ ವಿಧಗಳಿವೆ. ಈ ಭಿನ್ನತೆಯೇ ಪ್ರತಿ ವಜ್ರದ ಬೆಲೆ ಮತ್ತು ಗುಣಮಟ್ಟವನ್ನು ನಿರ್ಧರಿಸುತ್ತದೆ. ಹಾಗಿದ್ದರೆ, ಈ ಹೊಳೆಯುವ ಕಲ್ಲುಗಳಲ್ಲಿ ಇರುವ ವಿಧಗಳು ಮತ್ತು ಅವುಗಳ ನಡುವಿನ ವ್ಯತ್ಯಾಸಗಳ ಕುರಿತು ಒಂದು ನೋಟ ಇಲ್ಲಿದೆ.

ವಜ್ರಗಳನ್ನು ಸ್ಥೂಲವಾಗಿ ನೈಸರ್ಗಿಕ ವಜ್ರಗಳು ಮತ್ತು ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳು ಎಂದು ವಿಂಗಡಿಸಲಾಗಿದೆ.

ನೈಸರ್ಗಿಕ ವಜ್ರಗಳು: ಇವು ಭೂಮಿಯ ಆಳದಲ್ಲಿ ಶತಕೋಟಿ ವರ್ಷಗಳ ಕಾಲ ಅತ್ಯಧಿಕ ಒತ್ತಡ ಮತ್ತು ಶಾಖದಲ್ಲಿ ನೈಸರ್ಗಿಕವಾಗಿ ರೂಪುಗೊಳ್ಳುತ್ತವೆ. ಈ ಪ್ರಕ್ರಿಯೆಯಿಂದಾಗಿ, ಇವುಗಳು ಸಾರಜನಕ ಮತ್ತು ಬೋರಾನ್ ನಂತಹ ನೈಸರ್ಗಿಕ ಕಲ್ಮಶಗಳನ್ನು ಹೊಂದಿರುತ್ತವೆ. ಈ ಕಲ್ಮಶಗಳು ಅವುಗಳ ಬಣ್ಣ ಮತ್ತು ಹೊಳಪಿನ ಮೇಲೆ ಪರಿಣಾಮ ಬೀರುತ್ತವೆ.

ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳು: ಇವುಗಳನ್ನು HPHT ಮತ್ತು CVD ಎಂಬ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಕೃತಕವಾಗಿ ರಚಿಸಲಾಗುತ್ತದೆ. ಈ ವಜ್ರಗಳು ನೈಸರ್ಗಿಕ ವಜ್ರಗಳಂತೆಯೇ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳನ್ನು ಹೊಂದಿರುತ್ತವಾದರೂ, ಅವುಗಳ ಉತ್ಪಾದನಾ ಪ್ರಕ್ರಿಯೆಯಿಂದಾಗಿ ನೈಸರ್ಗಿಕ ವಜ್ರಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಾಗುತ್ತವೆ.

ವಜ್ರದೊಳಗೆ ಅಡಗಿರುವ ರಾಸಾಯನಿಕ ಸಂಯೋಜನೆಯ ಆಧಾರದ ಮೇಲೆ ಅವುಗಳನ್ನು ನಾಲ್ಕು ಮುಖ್ಯ ‘ಟೈಪ್’ಗಳಾಗಿ ವಿಂಗಡಿಸಲಾಗಿದೆ:

ವಜ್ರದ ಪ್ರಕಾರಮುಖ್ಯ ಅಂಶ/ಕಲ್ಮಶಬಣ್ಣ/ಗುಣಲಕ್ಷಣವಿಶೇಷತೆ
ಟೈಪ್ Iaಸಮೂಹಗಳಲ್ಲಿ ಸಾರಜನಕಹಳದಿ ಅಥವಾ ಕಂದುಸಾಮಾನ್ಯವಾಗಿ ಕಂಡುಬರುವ ವಿಧ
ಟೈಪ್ Ibಏಕ ಪರಮಾಣುಗಳಾಗಿ ಸಾರಜನಕಗಾಢ ಹಳದಿನೈಸರ್ಗಿಕ ವಜ್ರಗಳಲ್ಲಿ ವಿರಳ
ಟೈಪ್ IIaಕಲ್ಮಶಗಳಿಂದ ಮುಕ್ತಅತ್ಯಂತ ಶುದ್ಧ, ಪಾರದರ್ಶಕವಿಶ್ವದ ಅತ್ಯಂತ ಶುದ್ಧ ವಜ್ರ. ಪ್ರಸಿದ್ಧ ಕೋಹಿನೂರ್ ಸಹ ಈ ವಿಧಕ್ಕೆ ಸೇರಿದೆ.
ಟೈಪ್ IIbಬೋರಾನ್ ಸಂಯುಕ್ತನೀಲಿ ಅಥವಾ ಬೂದುಅತ್ಯಂತ ಅಪರೂಪದ ನೀಲಿ ಬಣ್ಣದ ವಜ್ರಗಳು

ವಜ್ರದ ಬಣ್ಣವು ಅದರ ಬೆಲೆ ಮತ್ತು ವಿರಳತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬಣ್ಣರಹಿತ ವಜ್ರಗಳು: ಸಂಪೂರ್ಣವಾಗಿ ಬಣ್ಣರಹಿತವಾಗಿರುವ ವಜ್ರಗಳು ಅತ್ಯಂತ ಪ್ರೀಮಿಯಂ ಮತ್ತು ದುಬಾರಿ ಎನಿಸಿಕೊಂಡಿವೆ.

ಹಳದಿ/ಕಂದು ವಜ್ರಗಳು: ಸಾರಜನಕದ ಅಂಶದಿಂದಾಗಿ ಈ ಬಣ್ಣಗಳು ಬರುತ್ತವೆ.

ನೀಲಿ ವಜ್ರಗಳು: ಬೋರಾನ್ ಸಂಯುಕ್ತದ ಉಪಸ್ಥಿತಿಯಿಂದಾಗಿ ಇವು ನೀಲಿ ಬಣ್ಣದಿಂದ ಕೂಡಿರುತ್ತವೆ.

ಅಪರೂಪದ ಬಣ್ಣಗಳು: ಪಿಂಕ್, ರೆಡ್ ಮತ್ತು ಗ್ರೀನ್ ಬಣ್ಣದ ವಜ್ರಗಳು ಅತ್ಯಂತ ವಿರಳ ಮತ್ತು ಸೀಮಿತ ಪ್ರಮಾಣದಲ್ಲಿ ಕಂಡುಬರುತ್ತವೆ. ಇವುಗಳನ್ನು ವಿಶ್ವದ ಅತ್ಯಂತ ದುಬಾರಿ ರತ್ನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

error: Content is protected !!