ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿಯೋ-ಪಾಲಿಟಿಕ್ಸ್ ತೀವ್ರವಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲೇ ಅಮೆರಿಕಾ ಹೊಸ ಅಂತಾರಾಷ್ಟ್ರೀಯ ಬ್ಲಾಕ್ ರಚಿಸುವ ಯೋಚನೆಗೆ ಮುಂದಾಗಿದೆ ಎಂಬ ವರದಿ ಚರ್ಚೆಗೆ ಗ್ರಾಸವಾಗಿದೆ. ಪಾರಂಪರಿಕ ಶಕ್ತಿಕೇಂದ್ರಗಳ ಪ್ರಭಾವ ಕುಸಿಯುತ್ತಿದ್ದರೆ, ಜಾಗತಿಕ ಸಮತೋಲನವನ್ನು ಹೊಸ ರೂಪದಲ್ಲಿ ಕಟ್ಟಿಕೊಳ್ಳಲು ಟ್ರಂಪ್ ಆಡಳಿತ ಪರ್ಯಾಯ ಶಕ್ತಿಗಳನ್ನು ಒಂದೇ ವೇದಿಕೆಗೆ ಕರೆತರಲು ತಾತ್ಪರ್ಯ ತೋರಿಸಿದೆ ಎಂದು ಅಮೆರಿಕದ ರಾಜತಾಂತ್ರಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಯುರೋಪ್ ಪ್ರಾಬಲ್ಯ ಹೊಂದಿರುವ G7 ಗುಂಪಿನ ಪರ್ಯಾಯವಾಗಿ ಭಾರತ, ಚೀನಾ, ರಷ್ಯಾ, ಜಪಾನ್ ಮತ್ತು ಅಮೆರಿಕ ಸೇರಿರುವ ‘ಕೋರ್ ಫೈವ್’ ಎಂಬ ಹೊಸ ವೇದಿಕೆಯ ಆಲೋಚನೆಯು ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದ ಅಪ್ರಕಟಿತ ಆವೃತ್ತಿಯಲ್ಲಿ ಪ್ರಸ್ತಾಪಗೊಂಡಿದೆ ಎಂದು ಪೊಲಿಟಿಕೊ ವರದಿ ತಿಳಿಸಿದೆ. ಆದರೆ ಶ್ವೇತಭವನ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಉಕ್ರೇನ್-ರಷ್ಯಾ ಯುದ್ಧದಿಂದ ಯುರೋಪ್ ಮತ್ತು ರಷ್ಯಾ ನಡುವಿನ ಬಿರುಕು ಹೆಚ್ಚುತ್ತಿರುವ ಸಂದರ್ಭದಲ್ಲಿ, ಹೊಸ ಸಮತೋಲನದ ರಾಜಕೀಯ ನಿರ್ಮಿಸಲು ಅಮೆರಿಕಾ ಯುರೋಪ್ ರಾಷ್ಟ್ರಗಳನ್ನು ಈ ವೇದಿಕೆಯಿಂದ ದೂರ ಇಡಲು ಬಯಸುತ್ತಿದೆ ಎಂಬ ಅಂದಾಜು ವ್ಯಕ್ತವಾಗಿದೆ.

