Friday, December 12, 2025

ಪತಿಯನ್ನು ಹೊಗಳುವ ಭರದಲ್ಲಿ ಯಡವಟ್ಟು ಮಾಡಿಕೊಂಡ ಜಡೇಜಾ ಪತ್ನಿ: ಅಂತಹದ್ದು ಏನಂದ್ರು ಗೊತ್ತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾಅವರ ಪತ್ನಿ, ಗುಜರಾತ್ ಸಚಿವೆ ರಿವಾಬಾ ಜಡೇಜಾ ಆಘಾತಕಾರಿ ಹೇಳಿಕೆಯೊಂದನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಗುಜರಾತ್‌ನ ದ್ವಾರಕಾದಲ್ಲಿ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿವಾಬಾ, ರವೀಂದ್ರ ಜಡೇಜಾ ಅವರ ಜವಾಬ್ದಾರಿ ಮತ್ತು ಬದ್ಧತೆಯನ್ನು ಎತ್ತಿ ತೋರಿಸುವ ಉದ್ದೇಶ ಹೊಂದಿದ್ದರೂ, ಅವರ ಜೀವನಶೈಲಿಯನ್ನು ತಂಡದ ಇತರ ಆಟಗಾರರ ಜೀವನಶೈಲಿಗೆ ಹೋಲಿಸಿರುವುದು ಇದೀಗ ಕ್ರಿಕೆಟಿಗರು ಮತ್ತು ಅವರ ಅಭಿಮಾನಿಗಳಲ್ಲಿ ಮಹತ್ವದ ಚರ್ಚೆಗೆ ನಾಂದಿ ಹಾಡಿದೆ.

ವಿದೇಶಿ ಪ್ರವಾಸಗಳ ಸಮಯದಲ್ಲಿ ಕೆಲವು ಭಾರತೀಯ ಕ್ರಿಕೆಟಿಗರು ವಿವಿಧ ದುಶ್ಚಟಗಳಲ್ಲಿ ತೊಡಗುತ್ತಾರೆ ಎಂದು ಆರೋಪಿಸಿ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಆದರೆ, ನನ್ನ ಪತಿ ಎಂದಿಗೂ ಅಂತಹ ಯಾವುದೇ ದುಶ್ಚಟಗಳಲ್ಲಿ ಇದುವರೆಗೂ ತೊಡಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿವಾಬಾ ಜಡೇಜಾ, ನನ್ನ ಪತಿ, ಕ್ರಿಕೆಟಿಗ ರವೀಂದ್ರ ಜಡೇಜಾ ಕ್ರಿಕೆಟ್ ಆಡಲು ಲಂಡನ್, ದುಬೈ ಮತ್ತು ಆಸ್ಟ್ರೇಲಿಯಾದಂತಹ ಹಲವು ದೇಶಗಳಿಗೆ ಪ್ರಯಾಣಿಸಬೇಕಾಗುತ್ತದೆ. ಆದರೂ, ಇಂದಿಗೂ ಅವರು ಯಾವುದೇ ರೀತಿಯ ದುಶ್ಚಟಗಳನ್ನು ಮಾಡಿಲ್ಲ. ಏಕೆಂದರೆ ಅವರು ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡಿದ್ದಾರೆ. ಕ್ರಿಕೆಟ್ ತಂಡದ ಉಳಿದವರೆಲ್ಲರೂ ದುಶ್ಚಟಗಳನ್ನು ರೂಢಿಸಿಕೊಂಡಿದ್ದಾರೆ. ಆದರೆ ಅವರ ಕುಟುಂಬಗಳಿಂದ ಅದಕ್ಕೆ ಯಾವುದೇ ನಿರ್ಬಂಧವಿಲ್ಲ” ಎಂದು ರಿವಾಬಾ ಹೇಳಿದ್ದಾರೆ. ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಒಮ್ಮೆ ನಾವು ಜೀವನದಲ್ಲಿ ಪ್ರಗತಿ ಸಾಧಿಸಿದ ನಂತರ ನಡೆದುಬಂದ ಹಾದಿಯನ್ನು ಮರೆಯಬಾರದು. ನಮ್ಮ ಸಾಂಸ್ಕೃತಿಕ ಬೇರುಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ರಿವಾಬಾ ಹೇಳಿದ್ದಾರೆ.

error: Content is protected !!