ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ವಸ್ತುಗಳ ಮೇಲೆ ಶೇ.50ರಷ್ಟು ಹೆಚ್ಚುವರಿ ಸುಂಕ ವಿಧಿಸಿರುವುದನ್ನು ವಿರೋಧಿಸಿ, ಪ್ರತಿನಿಧಿ ಸಭೆಯ ಮೂವರು ಸದಸ್ಯರು ಶನಿವಾರ ನಿರ್ಣಯ ಮಂಡಿಸಿದ್ದಾರೆ.
ರಾಷ್ಟ್ರೀಯ ತುರ್ತು ಅಧಿಕಾರವನ್ನು ಬಳಸಿಕೊಂಡು ಜಾರಿಗೊಂಡಿರುವ ಈ ಸುಂಕ ಕ್ರಮವು ಅಮೆರಿಕದ ಕಾರ್ಮಿಕರು, ಗ್ರಾಹಕರು ಮತ್ತು ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಕಾರಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯರಾದ ಡೆಬೊರಾ ರಾಸ್, ಮಾರ್ಕ್ ವೀಸಿ ಮತ್ತು ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿ ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಭಾರತದ ಮೇಲಿನ ಹೆಚ್ಚುವರಿ ಆಮದು ಸುಂಕಗಳು ಕಾನೂನುಬಾಹಿರವಾಗಿದ್ದು, ಇದರಿಂದ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳಿಗೆ ಹಾನಿ ಉಂಟಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 27, 2025ರಿಂದ ಜಾರಿಗೊಂಡಿರುವ ಹೆಚ್ಚುವರಿ ಶೇ.25ರಷ್ಟು ಸುಂಕವನ್ನು ಹಿಂದಕ್ಕೆ ಪಡೆಯುವುದು ಈ ನಿರ್ಣಯದ ಪ್ರಮುಖ ಉದ್ದೇಶವಾಗಿದೆ. ಈಗಿರುವ ಪರಸ್ಪರ ಸುಂಕಗಳೊಂದಿಗೆ ಸೇರಿ ಭಾರತೀಯ ಉತ್ಪನ್ನಗಳ ಮೇಲೆ ಒಟ್ಟು ಶೇ.50ರಷ್ಟು ತೆರಿಗೆ ಬಿದ್ದಿದೆ.
ಭಾರತವು ಅಮೆರಿಕದ ಪ್ರಮುಖ ಆರ್ಥಿಕ ಮತ್ತು ತಂತ್ರಜ್ಞಾನ ಪಾಲುದಾರ ಎಂದು ಡೆಬೊರಾ ರಾಸ್ ಹೇಳಿದ್ದಾರೆ. ಭಾರತೀಯ ಕಂಪನಿಗಳ ಹೂಡಿಕೆಯಿಂದ ಉತ್ತರ ಕೆರೊಲಿನಾದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಅವರು ಉಲ್ಲೇಖಿಸಿದರು. ಇನ್ನು ಈ ಸುಂಕಗಳು ಪೂರೈಕೆ ಸರಪಳಿಯನ್ನು ಅಸ್ತವ್ಯಸ್ತಗೊಳಿಸಿ, ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯನ್ನು ಹೆಚ್ಚಿಸುತ್ತಿವೆ ಎಂದು ವೀಸಿ ಅಭಿಪ್ರಾಯಪಟ್ಟರು. ರಾಜಾ ಕೃಷ್ಣಮೂರ್ತಿ ಕೂಡ ಈ ಕ್ರಮಗಳು ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದು, ಭಾರತ-ಅಮೆರಿಕ ಸಂಬಂಧ ಪುನಶ್ಚೇತನಗೊಳ್ಳಬೇಕೆಂದು ಆಗ್ರಹಿಸಿದರು.

