ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಖ್ಯಾತಿಯ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕ್ಕಿ ಕೇಜ್ ಅವರ ನಿವಾಸದಲ್ಲಿ ಕಳ್ಳತನ ನಡೆದಿದ್ದು, ಆರೋಪಿಯನ್ನು ಜೊಮ್ಯಾಟೋ ಡೆಲಿವರಿ ಸಿಬ್ಬಂದಿ ಎನ್ನಲಾಗಿದೆ. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ಕುರಿತು ಸ್ವತಃ ರಿಕ್ಕಿ ಕೇಜ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಗುರುವಾರ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಅವರ ಮನೆಗೆ ಆಹಾರ ವಿತರಣೆಗೆ ಬಂದ ಜೊಮ್ಯಾಟೋ ಡೆಲಿವರಿ ಬಾಯ್, ಆಹಾರ ಕೊಟ್ಟು ಹೋದ ಬಳಿಕ ಮತ್ತೆ ಮನೆ ಆವರಣಕ್ಕೆ ನುಗ್ಗಿ ಸಂಪ್ ಕವರ್ ಕದ್ದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಡೆಲಿವರಿ ನೀಡಿದ ಸುಮಾರು 15 ನಿಮಿಷಗಳಲ್ಲೇ ಆತ ಮರುಪ್ರವೇಶ ಮಾಡಿ ಕಳ್ಳತನ ಎಸಗಿರುವುದು ಕಂಡುಬಂದಿದೆ ಎಂದು ರಿಕಿ ಕೇಜ್ ಆರೋಪಿಸಿದ್ದಾರೆ.
ಎರಡು ವಿಭಿನ್ನ ಕೋನಗಳಲ್ಲಿ ಸಿಸಿಟಿವಿ ದೃಶ್ಯಗಳು ಲಭ್ಯವಿದ್ದು, ಆರೋಪಿಯ ಮುಖ ಸ್ಪಷ್ಟವಾಗಿ ಕಾಣಿಸುತ್ತಿದೆ. ಅಲ್ಲದೆ ಕೆಂಪು ಬಣ್ಣದ ಹೋಂಡಾ ಆಕ್ಟಿವಾ ವಾಹನದ ನಂಬರ್ ಪ್ಲೇಟ್ ಕೂಡ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ಬೆಂಗಳೂರು ನಗರ ಪೊಲೀಸರಿಗೂ ಟ್ಯಾಗ್ ಮಾಡಿರುವ ರಿಕ್ಕಿ ಕೇಜ್, ಆರೋಪಿಯನ್ನು ಗುರುತಿಸಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಎಚ್ಚರಿಕೆ ನೀಡಿದ್ದಾರೆ.

