ಆರೋಗ್ಯ ಕಾಪಾಡಿಕೊಳ್ಳಬೇಕು ಅನ್ನೋ ಉದ್ದೇಶದಿಂದ ಹಲವರು ಹಸಿಯಾದ ತರಕಾರಿಗಳತ್ತ ಹೆಚ್ಚು ಒಲವು ತೋರಿಸುತ್ತಾರೆ. ಆದರೆ “ಹಸಿಯಾಗಿದ್ದರೆ ಅಷ್ಟೇ ಆರೋಗ್ಯ” ಅನ್ನೋ ಭ್ರಮೆ ಯಾವಾಗಲೂ ಸರಿ ಅಲ್ಲ. ಕೆಲವು ತರಕಾರಿಗಳನ್ನು ಹಸಿಯಾಗಿ ಸೇವಿಸಿದರೆ ದೇಹಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚು. ತಜ್ಞರ ಪ್ರಕಾರ, ಕೆಲ ಹಸಿ ತರಕಾರಿಗಳಲ್ಲಿ ಪರಾವಲಂಬಿಗಳು, ಬ್ಯಾಕ್ಟೀರಿಯಾ ಮತ್ತು ಜೀರ್ಣಕ್ಕೆ ಅಡ್ಡಿಯಾಗುವ ಸಂಯುಕ್ತಗಳು ಇರಬಹುದು. ಆದ್ದರಿಂದ ಇವುಗಳನ್ನು ಸರಿಯಾಗಿ ತೊಳೆಯದೇ ಅಥವಾ ಬೇಯಿಸದೇ ತಿನ್ನುವುದು ಅಪಾಯಕಾರಿ.
- ಎಲೆಕೋಸು: ಎಲೆಕೋಸಿನಲ್ಲಿ ಕಾಣದಂತೆ ಟೇಪ್‌ವರ್ಮ್‌ಗಳು ಅಥವಾ ಅವುಗಳ ಮೊಟ್ಟೆಗಳಿರಬಹುದು. ಹೀಗಾಗಿ ಬಿಸಿ ನೀರಿನಲ್ಲಿ ಬ್ಲಾಂಚ್ ಮಾಡಿ ನಂತರ ಬೇಯಿಸಿ ಸೇವಿಸುವುದು ಸುರಕ್ಷಿತ.
- ಕ್ಯಾಪ್ಸಿಕಂ: ಸಲಾಡ್‌ನಲ್ಲಿ ಹಸಿಯಾಗಿ ಬಳಸುವ ಕ್ಯಾಪ್ಸಿಕಂನ ಬೀಜಗಳಲ್ಲಿ ಸೂಕ್ಷ್ಮಜೀವಿಗಳ ಅಪಾಯ ಇರಬಹುದು. ಬ್ಲಾಂಚ್ ಮಾಡಿದ ಬಳಿಕ ಬಳಸುವುದು ಉತ್ತಮ.
- ಕೆಸುವಿನ ಎಲೆಗಳು: ಇವುಗಳನ್ನು ಎಂದಿಗೂ ಹಸಿಯಾಗಿ ಸೇವಿಸಬಾರದು. ಬಿಸಿ ನೀರಿನಲ್ಲಿ ಬ್ಲಾಂಚ್ ಮಾಡಿದರೆ ಆಕ್ಸಲೇಟ್ ಮಟ್ಟ ಕಡಿಮೆಯಾಗುತ್ತದೆ. ಇದೇ ನಿಯಮ ಪಾಲಕ್ ಮತ್ತು ಕೇಲ್‌ಗೂ ಅನ್ವಯಿಸುತ್ತದೆ.
- ಅಣಬೆಗಳು: ಹಸಿ ಅಣಬೆಗಳು ಜೀರ್ಣಕ್ಕೆ ಕಷ್ಟವಾಗುವ ನಾರುಗಳು ಮತ್ತು ವಿಷಕಾರಿ ಅಂಶಗಳನ್ನು ಹೊಂದಿರುತ್ತವೆ. ಚೆನ್ನಾಗಿ ಬೇಯಿಸಿದರೆ ಮಾತ್ರ ಸುರಕ್ಷಿತ.
- ಹಾಗಲಕಾಯಿ: ಹಸಿಯಾಗಿ ತಿಂದರೆ ಹೊಟ್ಟೆ ನೋವು, ವಾಕರಿಕೆ ಉಂಟಾಗಬಹುದು. ಮಸಾಲೆಗಳೊಂದಿಗೆ ಬೇಯಿಸುವುದು ಒಳಿತು.
- ಬದನೆಕಾಯಿ: ಬೀಜಗಳಲ್ಲಿ ಪರಾವಲಂಬಿಗಳ ಅಪಾಯವಿರುವುದರಿಂದ ಚೆನ್ನಾಗಿ ಬೇಯಿಸಿ ಸೇವಿಸಬೇಕು.
ಒಟ್ಟಾರೆ, ತರಕಾರಿಗಳು ಆರೋಗ್ಯಕ್ಕೆ ಅಗತ್ಯವೇ ಸರಿ, ಆದರೆ ಸರಿಯಾದ ರೀತಿಯಲ್ಲಿ ತಯಾರಿಸಿ ಸೇವಿಸುವುದೇ ನಿಜವಾದ ಆರೋಗ್ಯದ ಗುಟ್ಟು.

