ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿರಿಯಾದ ಮಧ್ಯಭಾಗದಲ್ಲಿ ನಡೆದ ಅಚಾನಕ್ ಗುಂಡಿನ ದಾಳಿಯೊಂದು ಅಮೆರಿಕ ಪಡೆಗಳಿಗೆ ಭಾರೀ ನಷ್ಟ ಉಂಟುಮಾಡಿದೆ. ಪಾಲ್ಮಿರಾ ಬಳಿಯ ಅಸ್ಥಿರ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ಅಮೆರಿಕ ಸೈನಿಕರು ಹಾಗೂ ಒಬ್ಬ ಅಮೆರಿಕ ನಾಗರಿಕರು ಸಾವನ್ನಪ್ಪಿದ್ದು, ಇನ್ನೂ ಮೂವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಅಮೆರಿಕ ಆರೋಪಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ.
ಐತಿಹಾಸಿಕ ಪಾಲ್ಮಿರಾ ನಗರದ ಸಮೀಪದ ಪ್ರದೇಶದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಐಸಿಸ್ ಸಂಬಂಧ ಹೊಂದಿದ್ದ ಬಂದೂಕುಧಾರಿ ಮಿಲಿಟರಿ ಪೋಸ್ಟ್ ಬಳಿ ಗುಂಡು ಹಾರಿಸಿದ್ದು, ಬಳಿಕ ಆತ ಕೊಲ್ಲಲ್ಪಟ್ಟಿದ್ದಾನೆ. ಗಾಯಗೊಂಡ ಸೈನಿಕರನ್ನು ತಕ್ಷಣ ಹೆಲಿಕಾಪ್ಟರ್ ಮೂಲಕ ಅಲ್-ತನ್ಫ್ ಗ್ಯಾರಿಸನ್‌ಗೆ ಸ್ಥಳಾಂತರಿಸಲಾಗಿದೆ. ಸಾವನ್ನಪ್ಪಿದ ಇಬ್ಬರು ಸೈನಿಕರು ಅಯೋವಾ ನ್ಯಾಷನಲ್ ಗಾರ್ಡ್ ಸದಸ್ಯರು ಎಂದು ಅಮೆರಿಕ ಅಧಿಕಾರಿಗಳು ದೃಢಪಡಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟ ನಾಗರಿಕನು ಅಮೆರಿಕ ಪಡೆಗಳಿಗೆ ಭಾಷಾಂತರಕಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎನ್ನಲಾಗಿದೆ.
ಈ ಘಟನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಟ್ರಂಪ್, ಇದು ಅಪಾಯಕಾರಿ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿ ಎಂದು ಹೇಳಿ, ಎಫ್‌ಬಿಐ ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಕೂಡ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡವರನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

