ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ಸಿಡ್ನಿಯ ಪ್ರಸಿದ್ಧ ಬೊಂಡಿ ಬೀಚ್‌ನಲ್ಲಿ ಯಹೂದಿಗಳ ಹನುಕ್ಕಾ ಹಬ್ಬದ ಆಚರಣೆಯ ಸಂದರ್ಭದಲ್ಲಿ ನಡೆದ ಮನಬಂದಂತೆ ಗುಂಡಿನ ದಾಳಿಯಲ್ಲಿ ಮೃತರ ಸಂಖ್ಯೆ 16 ಕ್ಕೆ ಏರಿದ್ದು, ಇದು ಆಸ್ಟ್ರೇಲಿಯಾದಲ್ಲಿ ಕಳೆದ ಮೂರು ದಶಕಗಳಲ್ಲಿ ನಡೆದ ಅತ್ಯಂತ ಮಾರಕ ಗುಂಡಿನ ದಾಳಿ ಎಂದು ಪರಿಗಣಿಸಲಾಗಿದೆ.
ಪೊಲೀಸರ ಪ್ರಕಾರ, ಈ ಭೀಕರ ಕೃತ್ಯವನ್ನು ಪಾಕಿಸ್ತಾನ ಮೂಲದ ತಂದೆ ಮತ್ತು ಮಗ ಒಟ್ಟಾಗಿ ಎಸಗಿದ್ದಾರೆ. ಆಸ್ಟ್ರೇಲಿಯಾ ಸರ್ಕಾರವು ಈ ಹತ್ಯಾಕಾಂಡವನ್ನು ಭಯೋತ್ಪಾದನಾ ಕೃತ್ಯ ಎಂದು ಘೋಷಿಸಿದೆ.
ನ್ಯೂ ಸೌತ್ ವೇಲ್ಸ್ ಪೊಲೀಸ್ ಆಯುಕ್ತ ಮಾಲ್ ಲ್ಯಾನ್ಯನ್ ಅವರು ಮಾಹಿತಿ ನೀಡಿದ್ದು, 50 ವರ್ಷದ ಆರೋಪಿ ಸಾಜಿದ್ ಅಕ್ರಮ್ ಎಂಬಾತನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಆತನ 24 ವರ್ಷದ ಮಗ ನವೀದ್ ಅಕ್ರಮ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದಾಳಿ ನಡೆದ 10 ನಿಮಿಷಗಳ ಅವಧಿಯಲ್ಲಿ ಬೀಚ್‌ನ ಹೊರಗಿರುವ ಸಣ್ಣ ಉದ್ಯಾನವನದಲ್ಲಿ ನಡೆಯುತ್ತಿದ್ದ ಹನುಕ್ಕಾ ಕಾರ್ಯಕ್ರಮದಲ್ಲಿ ಸುಮಾರು 1,000 ಜನರು ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ಸಮಯದಲ್ಲಿ ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳ ಹಿನ್ನೆಲೆ
ಮೃತ ಆರೋಪಿ ಸಾಜಿದ್ ಅಕ್ರಮ್ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದ. ಆತನ ಮಗ ನವೀದ್ ಅಕ್ರಮ್, ಸಿಡ್ನಿಯ ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ಇಸ್ಲಾಮಾಬಾದ್‌ನ ಹಮ್‌ದರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ. ಅಲ್ಲದೆ, ಪಶ್ಚಿಮ ಸಿಡ್ನಿಯಲ್ಲಿರುವ ಅಲ್-ಮುರಾದ್ ಸಂಸ್ಥೆಯಲ್ಲಿ ಆತ ಅರೇಬಿಕ್ ಮತ್ತು ಕುರಾನ್ ಅಧ್ಯಯನಗಳನ್ನೂ ಕಲಿತಿದ್ದ ಎನ್ನಲಾಗಿದೆ.
ಕಠಿಣ ಬಂದೂಕು ನಿಯಂತ್ರಣ ಕಾನೂನುಗಳನ್ನು ಹೊಂದಿರುವ ಆಸ್ಟ್ರೇಲಿಯಾದಲ್ಲಿ ಈ ಪ್ರಮಾಣದ ಗುಂಡಿನ ದಾಳಿ ನಡೆದಿರುವುದು ದೇಶದ ಭದ್ರತಾ ವ್ಯವಸ್ಥೆಗೆ ದೊಡ್ಡ ಆಘಾತ ನೀಡಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

