April 10, 2026
Friday, April 10, 2026
spot_img

ಅಗ್ನಿ ಅವಘಡ: ಶೋರೂಂ ತಲುಪುವ ಮುನ್ನವೇ ಲಾರಿಯಲ್ಲಿದ್ದ 40 ಯಮಹ ಬೈಕ್‌ಗಳು ಸುಟ್ಟು ಭಸ್ಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಮಹ ಕಂಪನಿಯ ಹೊಚ್ಚಹೊಸ ಬೈಕ್‌ಗಳನ್ನು ಹೊತ್ತು ಸಾಗಿಸುತ್ತಿದ್ದ ಲಾರಿಯೊಂದು ಆಕಸ್ಮಿಕ ಬೆಂಕಿಗೆ ಆಹುತಿಯಾಗಿ, ಲಾರಿಯಲ್ಲಿದ್ದ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ 40 ಬೈಕ್‌ಗಳು ಸುಟ್ಟು ಕರಕಲಾದ ಘಟನೆ ಬಳ್ಳಾರಿ ನಗರದ ಅನಂತಪುರ ರಸ್ತೆಯಲ್ಲಿರುವ ಆಟೋನಗರದಲ್ಲಿ ನಡೆದಿದೆ.

ಚೆನ್ನೈನಿಂದ ಬೈಕ್‌ಗಳನ್ನು ಹೊತ್ತು ತಂದಿದ್ದ ಲಾರಿಯು ಶೋರೂಂ ತಲುಪುವ ಮೊದಲೇ ಈ ದೊಡ್ಡ ಅನಾಹುತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತು. ಲಾರಿಯ ಕ್ಯಾಬಿನ್‌ನಲ್ಲಿದ್ದ ಚಾಲಕ ತಕ್ಷಣವೇ ಅಪಾಯವನ್ನು ಅರಿತು ಕೆಳಗೆ ಇಳಿದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸುವ ಕಾರ್ಯಕ್ಕೆ ಮುಂದಾದರು. ಆದರೆ ಅಷ್ಟರಾಗಲೇ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣವಾಗಿ ಸಿಲುಕಿದ್ದ ಬೈಕ್‌ಗಳು ಮತ್ತು ಲಾರಿ ಬಹುತೇಕ ಸುಟ್ಟು ಹೋಗಿದ್ದವು. ಈ ಘಟನೆಯಿಂದ ಯಮಹ ಕಂಪನಿಗೆ ಭಾರಿ ನಷ್ಟ ಉಂಟಾಗಿದೆ.

ಈ ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !